ಭೋಪಾಲ್
ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳು ಆಗಾಗ ಸುದ್ದಿಯಾಗುತ್ತಲೆ ಇರುತ್ತವೆ. ಕೆಲವೊಂದೆಡೆ ಉತ್ತಮ ಸೌಲಭ್ಯವಿದ್ದರೂ ಸುರಕ್ಷತೆ ಇಲ್ಲ ಎಂದು ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚಾಗಿ ಜನ ಆಯ್ಕೆ ಮಾಡುವುದೂ ಇದೆ. ಇದೀಗ ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆ ಒಳ ಹೊಕ್ಕರೆ ಕಾಯಿಲೆಗೆ ಬೀಳದವರೂ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಲ್ಲಿನ ಆಸ್ಪತ್ರೆ ಜನರ ಸುರಕ್ಷತೆ, ಆರೋಗ್ಯವನ್ನು ಗಾಳಿಗೆ ತೂರಿದಂತಿದೆ. ಸಾತ್ನಾ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಇಲಿಗಳು ಮುಕ್ತವಾಗಿ ರೋಗಿಗಳ ಮಧ್ಯೆಯೇ ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.
ಭೋಪಾಲ್ ಸತ್ನಾ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕ ಸುತ್ತಲೂ ಇಲಿಗಳು ಓಡಾಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಈ ಘಟನೆಯೂ ಸರ್ಕಾರಿ ಆಸ್ಪತ್ರೆ ಆರೋಗ್ಯ ಸೌಲಭ್ಯಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಸಾತ್ನಾ ಜಿಲ್ಲಾ ಆಸ್ಪತ್ರೆಯ ಎಸ್ಎನ್ಸಿಯು ಘಟಕದಲ್ಲಿ ಸುಮಾರು 40ಕ್ಕೂ ಹೆಚ್ಚು ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿವೆ. ಆದರೆ ಅತ್ಯಂತ ಶುಚಿಯಾಗಿರಬೇಕಾದ ಈ ಘಟಕದ ಕಂಪ್ಯೂಟರ್ಗಳು, ವೈದ್ಯಕೀಯ ಯಂತ್ರೋಪಕರಣಗಳ ಮೇಲೆ ಇಲಿಗಳು ಹರಿದಾಡುತ್ತಿರುವುದು ಕಂಡುಬಂದಿದೆ.
ಕಳೆದ ಅಕ್ಟೋಬರ್ನಲ್ಲಿ ಇಂದೋರ್ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿ ಕಚ್ಚಿದ ಪರಿಣಾಮ ಇಬ್ಬರು ನವಜಾತ ಶಿಶುಗಳು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ನವ ಜಾತ ಶಿಶುಗಳ ಆರೈಕೆ ಘಟಕ ಸುತ್ತಲೂ ಇಲಿಗಳು ಓಡಾಡುತ್ತಿರುವುದು ಕಂಡು ಬಂದಿದೆ. ಇಂತಹ ಸರಣಿ ಘಟನೆಗಳ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯ ಪ್ರದೇಶದ ಭಾರತದ ಇಲಿಗಳ ರಾಜಧಾನಿ ಆಗಿ ಬದಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ. ಅಲ್ಲಿನ ಅಧಿಕಾರಿಗಳು, ರಾಜಕೀಯ ನಾಯಕರು ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಆಸ್ಪತ್ರೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆಯೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಾತ್ನಾ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಯ ಹಳೆಯ ಕಟ್ಟಡದ ಕಾರಣದಿಂದ ಇಲಿಗಳನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಆದರೂ ಕೂಡಲೇ ಕೀಟನಾಶಕ ಸಿಂಪಡಣೆ ಮಾಡಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.








