ಹೈದರಾಬಾದ್
ಭಾರತ ರಾಷ್ಟ್ರ ಸಮಿತಿಯಿಂದ ಅಮಾನತುಗೊಂಡ ಬೆನ್ನಲ್ಲೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದಿದ್ದ ಮಾಜಿ ಸಂಸದೆ ಕೆ. ಕವಿತಾ ಇದೀಗ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಲು ಮುಂದಾಗಿದ್ದು, ಹೊಸ ಪಾರ್ಟಿ ಹುಟ್ಟು ಹಾಕುವುದಾಗಿ ಘೋಷಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಮ್ಮ ಪುತ್ರಿ ಕವಿತಾ ಅವರನ್ನು ಬಿಆರ್‌ಎಸ್‌ನಿಂದ ಅಮಾನತುಗೊಳಿಸಿದ್ದರು. ಇದೀಗ ಕವಿತಾ ತಮ್ಮ ಸಾಮಾಜಿಕ ಸಂಸ್ಥೆ ತೆಲಂಗಾಣ ಜಾಗೃತಿಯನ್ನು ರಾಜಕೀಯ ಪಕ್ಷವನ್ನಾಗಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ʼʼ2029ರಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ಜಾಗೃತಿ ಪಕ್ಷ ಸ್ಪರ್ಧಿಸಲಿದೆ. ಪಕ್ಷದ ಹೆಸರು ಇನ್ನೂ ಅಂತಿಮಗೊಂಡಿಲ್ಲ” ಎಂದು ಕವಿತಾ ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ ಕವಿತಾ ಅವರನ್ನು ಚಂದ್ರಶೇಖರ್ ರಾವ್ ಬಿಆರ್‌ಎಸ್‌ನಿಂದ ಅಮಾನತುಗೊಳಿಸಿದ್ದರು.
ಜೋಗುಳಾಂಬ ಗಡ್ವಾಲ್ ಜಿಲ್ಲೆಗೆ ಭೇಟಿ ನೀಡಿದ ಕವಿತಾ, ಹೊಸ ಪಕ್ಷ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ತೆಲಂಗಾಣದ ಸಂಸ್ಕೃತಿಯನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ. ತಮ್ಮ ʼಮನ ಊರು-ಮನ ಎಂಪಿʼ (ನಮ್ಮ ಊರು-ನಮ್ಮ ಎಂಪಿ) ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು ತಾವು ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ್ದಾರೆ. ಬಿಆರ್‌ಎಸ್ ಒಳಗಿನ ಆಂತರಿಕ ಕಚ್ಚಾಟದಿಂದ ತಾವು 2019ರ ಚುನಾವಣೆಯಲ್ಲಿ ಪರಾಭವ ಹೊಂದಿದ್ದಾಗಿ ಹೇಳಿದ್ದಾರೆ.
ಈ ಮಧ್ಯೆ ಕವಿತಾ ತಾವು ಯಾವು ಕಾರಣಕ್ಕೂ ತಂದೆಯ ಬಿಆರ್‌ಎಸ್ ಪಕ್ಷಕ್ಕೆ ಮರಳುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಇದರಿಂದ ಮನಸ್ಸಿಗೆ ನೋವಾಗಿರುವುದಾಗಿ ವಿವರಿಸಿದ್ದಾರೆ. 2029ರ ವಿಧಾನಸಭಾ ಚುನಾವಣೆಯತ್ತ ಸಂಪೂರ್ಣ ಗಮನ ಹರಿಸಿರುವುದಾಗಿ ತಿಳಿಸಿದ ಅವರು ರಾಜಕೀಯದಲ್ಲಿ ಹೊಸ ಛಾಪು ಮೂಡಿಸುವ ಭರವಸೆ ಹೊಂದಿದ್ದಾರೆ. ಕೆ. ಚಂದ್ರಶೇಖರ್ ರಾವ್ ಬಳಿಕ ತೆಲಂಗಾಣವನ್ನು ಹೊಸ ದಿಶೆಯಲ್ಲಿ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದ ಅವರು ಬಿಆರ್‌ಎಸ್‌ನಲ್ಲಿ ತಮ್ಮ ವಿರುದ್ಧವೇ ಸಂಚು ನಡೆದಿತ್ತು ಎಂದು ತಿಳಿಸಿದ್ದಾರೆ. ಸದ್ಯ ಅವರ ಈ ನಡೆ ತೆಲಂಗಾಣ ರಾಜಕೀಯವನ್ನು ಯಾವ ರೀತಿ ಬದಲಾಯಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ತೆಲಂಗಾಣದ ರಾಜಕೀಯದಲ್ಲಿ ಪ್ರಬಲ ನಾಯಕಿ ಎನಿಸಿಕೊಂಡಿದ್ದ ಕವಿತಾ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ 2024ರ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ (ED)ದಿಂದ ಬಂಧನಕ್ಕೊಳಗಾಗಿದ್ದರು. ಅವರ ಬಂಧನವು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ದುರ್ಬಲಗೊಳಿಸಿತ್ತು. ಕವಿತಾ 2014ರಿಂದ 2019ರವರೆಗೆ ನಿಜಾಮಾಬಾದ್ ಸಂಸದೆಯಾಗಿದ್ದರು. ಅಮಾನತುಗೊಂಡ ಬೆನ್ನಲ್ಲೇ ಕವಿತಾ “ಪಕ್ಷದ ಆಂತರಿಕ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ದ್ವೇಷ ಸಾಧಿಸಲಾಯಿತು” ಎಂದು ಹೇಳಿದ್ದು ಭಾರಿ ಸುದ್ದಿಯಾಗಿತ್ತು. ಸದ್ಯ ಅವರ ನಡೆಯನ್ನು ಅವರ ಬಿಆರ್‌ಎಸ್ ಎಚ್ಚರಿಕೆಯಿಂದ ಗಮನಿಸುತ್ತಿದೆ.








