ಬೆಂಗಳೂರು
ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಪ್ರಕರಣದ ಸಂಬಂಧ ಪೊಲೀಸರು ಆರೋಪಿ ಫಯಾಜ್‌ನನ್ನು ಬಂಧಿಸಿದ್ದು, ಜೆಡಿಎಸ್ ರಾಜ್ಯ ಘಟಕ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ರಕ್ಷಣೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದು ಜಾತ್ಯತೀತ ಜನತಾದಳ ಆರೋಪಿಸಿದೆ.
ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ ಎಂದು ದೂರಿದೆ.
ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆ. ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ತುಷ್ಟೀಕರಣವು ಅಪರಾಧ ಮನೋಭಾವದ ಕಿಡಿಗೇಡಿಗಳಿಗೆ ಅಫೀಮಿನಂತಾಗಿದೆ. ಕೆಲವರಿಗಂತೂ ಈ ನೆಲದ ಕಾನೂನು ಕಟ್ಟಳೆ ಅನ್ವಯ ಆಗುತ್ತಿಲ್ಲವೇನೋ ಎಂಬ ಅನುಮಾನವೂ ಕಾಡುತ್ತಿದೆ. ಈ ಸರಕಾರವೂ ಹಾಗೆಯೇ ವರ್ತಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಜೀವ ತೆಗೆದ ಪರಮ ಪಾಪಿಯನ್ನು ಸುಮ್ಮನೆ ಬಿಡಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು. ಆ ನತದೃಷ್ಟ ವಿದ್ಯಾರ್ಥಿನಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜೆಡಿಎಸ್ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ