ರೋಮ್:
ಸದ್ಭಾವನೆಯ ಎಲ್ಲಾ ಜನರು ಕ್ರಿಸ್‌ಮಸ್ ಹಬ್ಬದಂದು ಶಾಂತಿಯ ದಿನವಾಗಿ ಗೌರವಿಸಿ ಜಾಗತಿಕ ಒಪ್ಪಂದ ನಡೆಸುವಂತೆ 14ನೇ ಪೋಪ್ ಲಿಯೋ ಕರೆ ನೀಡಿದ್ದಾರೆ. ಕನಿಷ್ಠ ಕ್ರಿಸ್ತನ ಜನ್ಮದಿನವಾದರೂ ಎಲ್ಲಾ ಜನರು ಶಾಂತಿ ದಿನವನ್ನಾಗಿ ಗೌರವಿಸಬೇಕು ಎಂದು ಅವರು ಹೇಳಿದರು. ರೋಮ್ ಬಳಿಯ ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಸ್‌ಮಸ್ ದಿನದಂದು ಶಾಂತಿಗಾಗಿ ಜಾಗತಿಕ ಒಪ್ಪಂದ ನಡೆಸಬೇಕು. ಆದರೆ ರಷ್ಯಾ ಈ ವಿನಂತಿಯನ್ನು ತಿರಸ್ಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಭಾವನೆ ಹೊಂದಿರುವ ಎಲ್ಲಾ ಜನರು ಕನಿಷ್ಠ ನಮ್ಮ ರಕ್ಷಕನ ಜನ್ಮ ದಿನದಂದು ಶಾಂತಿಯ ದಿನವನ್ನಾಗಿ ಆಚರಿಸಬೇಕು ಎಂದು ನಾನು ವಿನಂತಿ ಮಾಡುತ್ತೇನೆ. 2022ರ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಕದನ ವಿರಾಮಕ್ಕಾಗಿ ನೀಡಿರುವ ಕರೆಗಳನ್ನು ಅದು ಪದೇ ಪದೇ ತಿರಸ್ಕರಿಸಿದೆ. ಇದು ನನಗೆ ಬಹಳ ದುಃಖವನ್ನು ಉಂಟು ಮಾಡಿದೆ. ರಷ್ಯಾವು ಶಾಂತಿ ಒಪ್ಪಂದದ ವಿನಂತಿಯನ್ನು ತಿರಸ್ಕರಿಸಿದೆ. ಆದರೆ ಕ್ರಿಸ್‌ಮಸ್ ಹಬ್ಬದಂದು ಇಡೀ ಜಗತ್ತಿನಲ್ಲಿ 24 ಗಂಟೆಗಳ ಕಾಲ ಶಾಂತಿ ನೆಲೆಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದ ಅವರು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಮಾಸ್ಕೋದ ನಿರಂತರ ದಾಳಿಗಳಿಂದ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಚಳಿಗಾಲದ ಹಿಮಪಾತದಿಂದ ಸಾವಿರಾರು ಜನರಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹೀಗಾಗಿ ಉಕ್ರೇನ್ ಮಂಗಳವಾರ ದೇಶದ ಪೂರ್ವದಲ್ಲಿರುವ ಪಟ್ಟಣದಿಂದ ಸೈನ್ಯವನ್ನು ಹಿಂತೆಗೆದುಕೊಂಡಿತು. ಈ ನಡುವೆ ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮತ್ತು ಉಕ್ರೇನ್ ನ ಉನ್ನತ ಸಮಾಲೋಚಕರು ಮಿಯಾಮಿಯಲ್ಲಿ ಯುಎಸ್ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಗತಿ ಕಂಡಿಲ್ಲ ಎಂದರು.
ಡಿಸೆಂಬರ್ ತಿಂಗಳ ಆರಂಭದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಪೋಪ್ ಲಿಯೋ ಭೇಟಿಯಾದರು. ಉಕ್ರೇನ್‌ಗೆ ಭೇಟಿ ನೀಡಲು ಝೆಲೆನ್ಸ್ಕಿಯವರ ಆಹ್ವಾನವನ್ನು ಸ್ವೀಕರಿಸುತ್ತಿರೋ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಲಿಯೋ, ಹೌದು. ಆದರೆ ಯಾವಾಗ ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯುರೋಪಿಯನ್ ರಾಜತಾಂತ್ರಿಕ ಒಳಗೊಳ್ಳುವಿಕೆ ಇಲ್ಲದೆ ಉಕ್ರೇನ್‌ನಲ್ಲಿ ಶಾಂತಿ ಸಾಧ್ಯವಿಲ್ಲ ಎಂದ ಅವರು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಶಾಂತಿ ಯೋಜನೆಯು ಟ್ರಾನ್ಸ್ ಅಟ್ಲಾಂಟಿಕ್ ಮೈತ್ರಿಕೂಟದಲ್ಲಿ ದೊಡ್ಡ ಬದಲಾವಣೆ ಉಂಟು ಮಾಡುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.








