ನವದೆಹಲಿ
ದೇಶಾದ್ಯಂತ ಹೊಸ ವರ್ಷ ಆಗಮನದ ಸಂಭ್ರಮ ಹೆಚ್ಚಾಗಿರುವ ನಡುವೆಯೇ ಚುನಾವಣಾ ಕಣ ಕೂಡ ರಂಗೇರಲು ಪ್ರಾರಂಭವಾಗಿದೆ. 2025ರಲ್ಲಿ ಕೇವಲ ಎರಡು ವಿಧಾನಸಭಾ ಚುನಾವಣೆಗಳು ಮತ್ತು ಕೆಲವು ಉಪಚುನಾವಣೆಗಳು ನಡೆದಿದ್ದರೆ 2026ರಲ್ಲಿ 75 ರಾಜ್ಯಸಭಾ ಸ್ಥಾನಗಳೊಂದಿಗೆ ಐದು ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹೀಗಾಗಿ ಇದು ರಾಜಕೀಯ ವಲಯಕ್ಕೆ ಹೆಚ್ಚು ಕಾರ್ಯನಿರತ ವರ್ಷವಾಗಲಿದೆ. ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು 2026ರಲ್ಲಿ ನಡೆಯಲಿದೆ.
2024ರ ಲೋಕಸಭಾ ಚುನಾವಣೆಯ ಬಳಿಕ 2025ರಲ್ಲಿ ದೆಹಲಿ ಮತ್ತು ಬಿಹಾರ ಚುನಾವಣೆಗಳು ಮಾತ್ರ ನಡೆದಿವೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿ ವಿರೋಧ ಪಕ್ಷಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಹೀಗಾಗಿ ಈಗ ಎಲ್ಲರ ದೃಷ್ಟಿ 2026ರಲ್ಲಿ ನಡೆಯಬಹುದಾದ ಚುನಾವಣೆಗಳ ಮೇಲೆ ನೆಟ್ಟಿದೆ.
2026ರಲ್ಲಿ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಜತೆಗೆ ಖಾಲಿಯಾಗಲಿರುವ 75 ರಾಜ್ಯಸಭಾ ಸ್ಥಾನಗಳಿಗೂ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಮೇಲ್ಮನೆಯಲ್ಲಿ ಪ್ರಾಬಲ್ಯದ ಹೋರಾಟ ಬಹುತೇಕ ಎಲ್ಲರ ಚಿತ್ತವನ್ನು ಸೆಳೆದಿದೆ. ಇದರೊಂದಿಗೆ ಜನವರಿಯಲ್ಲಿ ಮುಂಬೈನಲ್ಲಿ ನಡೆಯುವ ಬಹುನಿರೀಕ್ಷಿತ ಬಿಎಂಸಿ ಚುನಾವಣೆಯು ಪ್ರಮುಖ ಸ್ಥಳೀಯ ಚುನಾವಣೆಯಲ್ಲಿ ಒಂದಾಗಿದೆ.
ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್‌ನ ಗೌರವ್ ಗೊಗೊಯ್ ನಡುವೆ ತೀವ್ರ ಸ್ಪರ್ಧೆ ಇದ್ದು ಇದು ದೇಶದ ಗಮನವನ್ನು ಸೆಳೆಯಲಿದೆ. 2021ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇಲ್ಲಿನ 126 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದರೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಮಹಾಜೋತ್ ಅಡಿಯಲ್ಲಿ 29 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ದಕ್ಷಿಣದಲ್ಲಿ ಪಾಬಲ್ಯ ಪಡೆಯಲು 2026ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಎಐಎಡಿಎಂಕೆ ಜತೆ ಕೈಜೋಡಿಸಿದೆ. ಈಗಾಗಲೇ ಇವು ಸೀಟು ಹಂಚಿಕೆಗಳ ಕುರಿತು ಮಾತುಕತೆ ಪ್ರಾರಂಭಿಸಿವೆ. ಇನ್ನು ಎಐಎಡಿಎಂಕೆ ನೇತೃತ್ವದ ವಿರೋಧ ಪಕ್ಷವು ಇಲ್ಲಿ ಅಧಿಕಾರ ಅವಧಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಇವರಿಗೆ ಟಿಟಿವಿ ದಿನಕರನ್ ಅವರ ಎಎಂಎಂಕೆ, ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ, ನಟ ವಿಜಯ್ ಸ್ಥಾಪಿಸಿರುವ ಟಿವಿಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್, ರಾಜ್ಯದಲ್ಲಿ ದಾಖಲೆಯ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಯುಡಿಎಫ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಇತ್ತೀಚೆಗೆ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ನಿರ್ಣಾಯಕ ಸ್ಥಾನ ಪಡೆದಿರುವುದು ಆಡಳಿತ ವಿರೋಧಿ ಅಲೆಯ ಸೂಚನೆ ಎನ್ನಲಾಗುತ್ತಿದೆ. ಇದರೊಂದಿಗೆ ಶಬರಿಮಲೆ ಚಿನ್ನದ ಹಗರಣ, ಕ್ರಿಶ್ಚಿಯನ್ ಮತಗಳಲ್ಲಿನ ಬದಲಾವಣೆ ಎಲ್‌ಡಿಎಫ್‌ಗೆ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ.
ದೇಶದ ಗಮನ ಸೆಳೆಯಲಿರುವ ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳ. ಇಲ್ಲಿ 2011ರಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ಹೋರಾಟ ನಡೆಸಲಿದೆ. ಆಡಳಿತಾರೂಢ ಟಿಎಂಸಿ ವಿರುದ್ಧ 2021ರಲ್ಲಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು 3ರಿಂದ 77ಕ್ಕೆ ಏರಿಸಿತ್ತು. ಈ ಬಾರಿ ಭ್ರಷ್ಟಾಚಾರ ಆರೋಪಗಳು, ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಕೆಲವು ಪ್ರಮುಖ ವಿಷಯಗಳಲ್ಲಿ ಆಡಳಿತ ವಿರೋಧಿ ಅಲೆ ಟಿಎಂಸಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಆದರೂ ಮಮತಾ ಬ್ಯಾನರ್ಜಿ ಬೆಂಕಿಯೊಂದಿಗೆ ಆಟವಾಡ ಬೇಡಿ ಎಂದು ಬಿಜೆಪಿಗೆ ಎಚ್ಚರಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗಾಗಿ ದೇಶಾದ್ಯಂತ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದಾರೆ.
2026ರ ಏಪ್ರಿಲ್, ಜೂನ್ ಮತ್ತು ನವೆಂಬರ್‌ನಲ್ಲಿ ಒಟ್ಟು 75 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದು ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಉತ್ತರ ಪ್ರದೇಶದ 10 ಸ್ಥಾನಗಳು, ಬಿಹಾರ 5, ಮಹಾರಾಷ್ಟ್ರ 7 ಮತ್ತು ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಹಲವು ಈಶಾನ್ಯ ರಾಜ್ಯಗಳು ಸೇರಿದಂತೆ ಪ್ರಮುಖ ರಾಜ್ಯಗಳ ಹುದ್ದೆಗಳು ಖಾಲಿಯಾಗಲಿದೆ. ಮುಖ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಎಚ್.ಡಿ. ದೇವೇಗೌಡ, ದಿಗ್ವಿಜಯ ಸಿಂಗ್ ಮತ್ತು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಬಿಎಲ್ ವರ್ಮಾ, ರವನೀತ್ ಸಿಂಗ್ ಬಿಟ್ಟು ಮತ್ತು ಜಾರ್ಜ್ ಕುರಿಯನ್ ಅವರ ಅಧಿಕಾರಾವಧಿ ಕೊನೆಯಾಗಲಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಉಂಟಾಗುವ ಅಸ್ಥಿರತೆ ವರ್ಷವಿಡೀ ಶಾಸಕಾಂಗ ಕಾರ್ಯತಂತ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನವರಿ 15ರಂದು ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಮಹಾರಾಷ್ಟ್ರದ 29 ಪುರಸಭೆಗಳೊಂದಿಗೆ ಸುಮಾರು 9 ವರ್ಷಗಳ ಅಂತರದ ಬಳಿಕ ಬಿಎಂಸಿ ಚುನಾವಣೆ ನಡೆಯಲಿದೆ. ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬಿಎಂಸಿ ಸ್ಥಾನಗಳ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ. 2022ರಲ್ಲಿ ಶಿವಸೇನೆ ವಿಭಜನೆಯಾದ ಬಳಿಕ ಬಿಎಂಸಿಗೆ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ.
ಇನ್ನು ಆಂಧ್ರ ಪ್ರದೇಶ, ಗುಜರಾತ್, ಕೇರಳ ಮತ್ತು ಕರ್ನಾಟಕ ಸೇರಿದಂತೆ ಇತರ ಹಲವು ರಾಜ್ಯಗಳಲ್ಲೂ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳು ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಮೇಲುಗೈ ಸಾಧಿಸಲು ಸಿದ್ಧತೆ ನಡೆಸುತ್ತಿವೆ.








