ಕಾಳಸಂತೆಯಲ್ಲಿ ಪಡಿತರ : ಕಳಪೆ ಅಕ್ಕಿ ಪೂರೈಕೆ : ತಣ್ಣಗೆ ಕುಳಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ವಿಶೇಷ ವರದಿ: ಶ್ರೀನಿವಾಸ್ ಆಚಾರಿ

      ಕರ್ನಾಟಕದಲ್ಲಿ ಪಡಿತರ ವ್ಯವಸ್ಥೆಯಡಿ (PDS) ವಿತರಿಸಲಾಗುವ ಅಕ್ಕಿಯ ಕಳಪೆ ಗುಣಮಟ್ಟದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. 

     ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ನೀಡುವ ಭರವಸೆಯಿದ್ದರೂ, ವಾಸ್ತವದಲ್ಲಿ ಹಲವು ಪಡಿತರ ಅಂಗಡಿಗಳಲ್ಲಿ ಕೀಟಗಳು, ಹುಳುಗಳಿರುವ, ಕೊಳೆತ ಅಥವಾ ಕಡಿಮೆ ಗುಣಮಟ್ಟದ ಅಕ್ಕಿ ವಿತರಣೆಯ ಕುರಿತು ದೂರುಗಳು ಹೆಚ್ಚಾಗುತ್ತಿವೆ.CAG ವರದಿಯಂತೆ, ಸಂಗ್ರಹಣೆ ಕೇಂದ್ರಗಳಲ್ಲಿ ಹುಳು, ಜೇಡದ ಬಲೆಗಳು ಮತ್ತು ಇಲಿಗಳ ಹಾವಳಿ ಕಂಡುಬಂದಿದ್ದು, ಇದರಿಂದ ಧಾನ್ಯಗಳ ಗುಣಮಟ್ಟ ಹಾಳಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ ಪಡಿತರ ಪೂರೈಸುವ ಟೆಂಡರ್ ದಾರರು ಕಳಪೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಟ್ಟಿದೆ.

     ಈ ಪಡಿತರ ವ್ಯವಸ್ಥೆಯಡಿ ಶಾಲಾ – ಕಾಲೇಜುಗಳಿಗೆ, ಹಾಸ್ಟೆಲ್ ಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಕಳಪೆ ಗುಣಮಟ್ಟದ ಪಡಿತರ ಕುರಿತು ತಳಮಟ್ಟದ ಅಧಿಕಾರಿಯಿಂದ ಹಿಡಿದು ಸರಕಾರದ ಹಿರಿಯ ಅಧಿಕಾರಿಗಳವರೆಗೂ ದಿವ್ಯ ಮೌನಕ್ಕೆ ಶರಣಾಗಿರುವುದು ಭ್ರಷ್ಟ ಆಡಳಿತ ವ್ಯವಸ್ಥೆಗೆ ಜ್ವಲoತ ಉದಾಹರಣೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲೂ ಪಡಿತರ ವ್ಯವಸ್ಥೆಯಲ್ಲಿ ಬಹುತೇಕವಾಗಿ ಇಂತಹ ಕಳಪೆ ಗುಣಮಟ್ಟದ ಪಡಿತರ ವಿತರಣೆಯಾಗುತ್ತಿರುವುದು ಕಾಣ ಬರುತ್ತದೆ. ಕಳಪೆ ಗುಣಮಟ್ಟದ ಪಡಿತರ ಅಕ್ಕಿ ಸೇರಿದಂತೆ ಪೂರೈಕೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿರುವ ಶಂಕೆಗಳಿವೆ.

    ಅಲ್ಲದೆ ಈ ಪಡಿತರ ಅಕ್ಕಿಯ ದುರುಪಯೋಗ ತಡೆಗಟ್ಟುವಲ್ಲಿ ಆಹಾರ ಇಲಾಖೆ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಶಿರಸಿಯಲ್ಲಿ ಪೂರೈಕೆಯಾಗುತ್ತಿರುವ ಕಳಪೆ ಅಕ್ಕಿ, ಬೇಯಿಸಲು ಬಾರದಷ್ಟು ಕಳಪೆಯಿಂದ ಕೂಡಿದೆ. ಅತ್ಯಂತ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆಯಾಗುತ್ತಿದ್ದರೂ ಜಿಲ್ಲಾ ಆರೋಗ್ಯ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಕಟ್ಟಿ ಕುಳಿತಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.

     ಇಲ್ಲಿ ಪೂರೈಕೆಯಾಗುತ್ತಿರುವ ಅಕ್ಕಿಯನ್ನು ಬೇಯಿಸಿ ಅನ್ನ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ. ಅದಕ್ಕೆಂದೆ ಇಲ್ಲಿ ಪಡಿತರ ಅಕ್ಕಿಯನ್ನು ಕಾಳಸoತೆಯಲ್ಲಿ ಮಾರಾಟ -ಖರೀದಿ ನಡೆಯುತ್ತಿದ್ದು ಅದನ್ನು ಅಕ್ಕಿ ಹಿಟ್ಟು ಮಾಡಲು ಬಳಸುವ ವ್ಯವಸ್ಥಿತವಾಗಿ ಲಾಭಿಯೊoದು ಕೆಲಸ ಮಾಡುತ್ತಿದೆ ಎಂದು ತಿಳಿದು ಬರುತ್ತದೆ. ಬೇಯಿಸಲಾಗದ ಅಕ್ಕಿ ನೀಡಿ ಸರಕಾರ ಪಡಿತರ ನೀಡುವುದರ ಬಗ್ಗೆ ದೊಡ್ಡದಾಗಿ ಪ್ರಚಾರ ಬಿಂಬಿಸಿಕೊಳ್ಳುತ್ತದೆ. 

    ಆದರೆ ವಾಸ್ತವವಾಗಿ ಈ ಅಕ್ಕಿಯನ್ನು ಬಳಸಲೇಬಾರದ ರೀತಿಯಲ್ಲಿ ಪೂರೈಕೆ ಮಾಡಲಾಗುತ್ತಿರುವುದಂತೂ ಸ್ಪಟಿಕದಷ್ಟೇ ಸತ್ಯ. ಸರಕಾರದ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಂದಾಗಿ ಬಡ ಪಡಿತರದಾರರು ಕಷ್ಟ ಅನುಭವಿಸುವಂತಾಗಿದೆ.

    ಇಷ್ಟಿದ್ದರೂ ಆಹಾರ ಇಲಾಖೆ ಶಿರಸ್ತೆದಾರರುಗಳು, ಫುಡ್ ಇನ್ಸ್ಪೆಕ್ಟರ್ಗಳು,ಉಪ ನಿರ್ದೇಶಕರುಗಳು ತಣ್ಣನೆಯ ಮೌನದಲ್ಲಿ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ. ಇದು ಕೇವಲ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಇಂತಹ ದೂರುಗಳು ವ್ಯಾಪಕವಾಗಿದೆ.

     ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಹುಳುಗಳಿರುವ ಅಕ್ಕಿ ಪತ್ತೆಯಾಗಿ ಪೋಷಕಾಹಾರ ಯೋಜನೆಯಲ್ಲೂ ಗುಣಮಟ್ಟದ ಕೊರತೆ ಎದ್ದುಕಾಣಿಸಿದೆ. ಇದರಿಂದ ಬಡ ಕುಟುಂಬಗಳು ಮತ್ತು ಮಕ್ಕಳ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಅಕ್ಕಿಯ ದುರುಪಯೋಗ, ಕಪ್ಪು ಮಾರುಕಟ್ಟೆಗೆ ಮಾರಾಟ ಮತ್ತು ಭ್ರಷ್ಟಾಚಾರದಿಂದಾಗಿ ಅರ್ಹರಿಗೆ ಸಿಗುವ ಅಕ್ಕಿ ಕಡಿಮೆಯಾಗುತ್ತಿದೆ ಎಂಬ ದೂರು -ಆರೋಪಗಳಿವೆ.

     ಸರ್ಕಾರವು ಇತ್ತೀಚೆಗೆ 5 ಕೆ.ಜಿ. ಅಕ್ಕಿಯ ಬದಲು ಇಂದಿರಾ ಆಹಾರ ಕಿಟ್ (ಬೇಳೆ, ಸಕ್ಕರೆ, ಎಣ್ಣೆ ಇತ್ಯಾದಿ) ನೀಡುವ ನಿರ್ಧಾರ ಕೈಗೊಂಡಿದ್ದು, ಇದು ದುರುಪಯೋಗ ತಡೆಗೆ ಸಹಾಯಕವೆಂದು ಹೇಳಿದೆ. ಆದರೆ ಗುಣಮಟ್ಟದ ಮೇಲ್ವಿಚಾರಣೆ, ಸರಿಯಾದ ಸಂಗ್ರಹಣೆ ಮತ್ತು ಪಾರದರ್ಶಕ ವಿತರಣೆಯ ಕೊರತೆಯಿಂದ ಸಮಸ್ಯೆ ಮುಂದುವರೆದಿದೆ.

Recent Articles

spot_img

Related Stories

Share via
Copy link