
ಪ್ರಜಾಪ್ರಗತಿ.ಕಾಂ
ಶಿರಾ: ತಾಲೂಕಿನ ತಡಕಲೂರು, ಗೋಣಿಹಳ್ಳಿ, ಬಡಮಾರನಹಳ್ಳಿ ಸೇರಿದಂತೆ ಹುಲಿಕುಂಟೆ ಹೋಬಳಿಯ ಬಹುಭಾಗದ ರೈತರ ದಾಳಿಂಬೆ, ಟಮೋಟೋ, ಪಪ್ಪಾಯಿ, ಮಾವು ಸೇರಿದಂತೆ ಅನೇಕ ಬೆಳೆಗಳು ಆಲಿಕಲ್ಲು ಮಳೆಯಿಂದ ನಷ್ಟವಾಗಿದ್ದು ಈ ಕೂಡಲೇ ಸರ್ಕಾರ ನೊಂದ ರೈತರಿಗೆ ಪರಿಹಾರ ನೀಡುವಂತೆ ಮಾಜಿ ಶಾಸಕ ಡಾ.ಸಿಎಂ ರಾಜೇಶ್ಗೌಡ ಒತ್ತಾಯಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಹುಲಿಕುಂಟೆ ಹೋಬಳಿ ರೈತರ ಜಮೀನುಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ ಬಹುತೇಕ ರೈತರು ದಾಳಿಂಬೆ, ಟೊಮಾಟೋ, ಮಾವು ಸೇರಿದಂತೆ ಇಂತಹ ವಾಣಿಜ್ಯ ಬೆಳೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇವುಗಳಿಂದಲೇ ಅವರ ಕುಟುಂಬಗಳ ಜೀವನೋಪಾಯ ನಡೆಯುತ್ತಿದ್ದು, ಮಕ್ಕಳ ಶಿಕ್ಷಣ, ಸಾಲ ತೀರಿಕೆ ಹಾಗೂ ದೈನಂದಿನ ಖರ್ಚುಗಳಿಗೂ ಇದೇ ಪ್ರಮುಖ ಆದಾಯ ಮೂಲವಾಗಿದೆ. ಈ ರೀತಿಯ ಅನಾಹುತಗಳಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸAಕಷ್ಟದಲ್ಲಿರುವ ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಹಾತಿ ಸಂಗ್ರಹಿಸಿ ಈ ಕೂಡಲೇ ಸರ್ಕಾರಕ್ಕೆ ವರದಿ ನೀಡಬೇಕು. ಬೆಳೆ ವಿಮೆಯ ಜೊತೆಗೆ ಸರ್ಕಾರ ಪರಿಹಾರವನ್ನೂ ನೀಡಬೇಕು ಎಂದು ಡಾ.ರಾಜೇಶ್ಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಮಹೇಶ್. ರವಿಕುಮಾರ್. ತಿಪ್ಪೇಸ್ವಾಮಿ. ಶಾಂತಕುಮಾರ್. ಶಿವರಾಜ್. ಗಿರೀಶ್. ರಾಮಚಂದ್ರಪ್ಪ. ರಂಗಸ್ವಾಮಿ. ಮಧು, ಮೋಹನ್ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು.








