
ಬೆಂಗಳೂರು: ಲೋಕಭವನ ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಪ್ರಾರಂಭವಾಗಿದ್ದು, ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪತ್ರದ ಮೂಲಕ ನಡೆಸುವುದಕ್ಕಾಗಿ ರಾಜ್ಯ ಸರ್ಕಾರ ಕಳೆದ ಅಧಿವೇಶನದಲ್ಲಿ ಒಪ್ಪಿಗೆ ಪಡೆದಿದ್ದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕವನ್ನು ರಾಜ್ಯಪಾಲರು ಪರಿಶೀಲನೆಗಾಗಿ ಬಾಕಿ ಉಳಿಸಿಕೊಂಡಿದ್ದಾರೆ.
ಕಳೆದ ಅಧಿವೇಶನದಲ್ಲಿ ಅಂಗೀಕಾರಗೊAಡ 11 ವಿಧೇಯಕಗಳ ಪೈಕಿ, ಇವ ನಮ್ಮವ ಇವ ನಮ್ಮವ ವಿಧೇಯಕವೂ ಸೇರಿದಂತೆ 10 ವಿಧೇಯಕಕ್ಕೆ ಮಾತ್ರ ಅಂಕಿತ ಹಾಕಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪತ್ರದ ಮೂಲಕ ನಡೆಸುವುದಕ್ಕಾಗಿ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಈ ವಿಧೇಯಕಕ್ಕೆ ಸಂಬAಧಪಟ್ಟAತೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಐಟಿಬಿಟಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಮತ್ತೆ ಶಿಲಾಯುಗದತ್ತ ಕರೆದೊಯ್ಯುತ್ತಿದೆ ಎಂದು ವಿಪಕ್ಷಗಳು ಆಕ್ಷೇಪ ಎತ್ತಿದ್ದವು.
ಆದರೆ, ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಸರ್ಕಾರ ವಿಧೇಯಕವನ್ನು ಧ್ವನಿಮತಕ್ಕೆ ಹಾಕಿ ಅಂಗೀಕಾರ ಪಡೆದುಕೊಂಡಿತ್ತು. ಕರ್ನಾಟಕ ಪೊಲೀಸ್ ಮಸೂದೆ, ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ÷್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಪ್ರತಿಬಂಧಕ ಮತ್ತು ನಿಷೇಧ (ಇವ ನಮವ ಇವ ನಮವ) ಮಸೂದೆ.
ಕರ್ನಾಟಕ ವೃತ್ತಿಗಳ, ಕಸುಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಮಸೂದೆ, ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿ (ರಕ್ಷಣೆ ಮತ್ತು ಸಕ್ರಮಾತಿ) ಮಸೂದೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ, ಕರ್ನಾಟಕ ಧನ ವಿನಿಯೋಗ ಮಸೂದೆ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ಮಸೂದೆ.
ದೇಶದಲ್ಲಿ ಬಿಜೆಪಿ ಇವಿಎಂ ಮೂಲಕ ಜಯ ಗಳಿಸುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ರಾಷ್ಟçವ್ಯಾಪಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಮೂಲಕ ನಡೆಸಲು ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ರಾಜ್ಯ ಸರ್ಕಾರದ ಈ ತೀರ್ಮಾನದ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಲೆಕ್ಕಾಚಾರ ಇದೆ ಎಂಬ ವ್ಯಾಖ್ಯಾನವೂ ನಡೆದಿತ್ತು. ಆದರೆ, ಈಗ ವಿಧೇಯಕದ ವೇಗಕ್ಕೆ ರಾಜ್ಯಪಾಲರು ನಿಯಂತ್ರಣ ಹಾಕಿರುವುದರಿಂದ ಚರ್ಚೆಗೆ ಮತ್ತೊಂದು ಸ್ವರೂಪ ಸಿಕ್ಕಿದೆ.








