
ಬೆಂಗಳೂರು: ವಿಧಾನಸಭಾ ಉಪಚುನಾವಣೆಗಳು ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ಪುನಾರಚನೆಯ ಕೂಗು ಕೇಳಿ ಬಂದಿದ್ದು, ಸಂಪುಟ ಪುನಾರಚನೆಗೆ ಆಗ್ರಹಿಸಿ ಕಾಂಗ್ರೆಸ್ನ ಹಿರಿಯ ಶಾಸಕರುಗಳು ದೆಹಲಿ ಯಾತ್ರೆಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 3 ವರ್ಷ ಪೂರೈಸುತ್ತಿದ್ದು, ಸಂಪುಟ ಪುನಾರಚಿಸಿ 3 ಮತ್ತು 4 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಹಿರಿಯ ಶಾಸಕರುಗಳು ಹೈಕಮಾಂಡ್ನ್ನು ಇಂದು ಇಲ್ಲವೇ ನಾಳೆ ಭೇಟಿ ಮಾಡಲಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಶಾಸಕರುಗಳಿಗೆ ಅವಕಾಶ ಸಿಕ್ಕಿಲ್ಲ. ಈಗಲಾದರೂ ಕನಿಷ್ಠ 7-8 ಹಿರಿಯ ಶಾಸಕರನ್ನು ಮಂತ್ರಿ ಮಾಡಬೇಕು ಎಂದು ಹೈಕಮಾಂಡ್ ಮುಂದೆ ಹಿರಿಯ ಶಾಸಕರುಗಳು ಮನವಿ ಮಾಡಲಿದ್ದಾರೆ.
ನಾಳೆ ಇಲ್ಲವೇ ನಾಡಿದ್ದು ಸುಮಾರು 35ಕ್ಕೂ ಹೆಚ್ಚು ಶಾಸಕರ ನಿಯೋಗ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ಸಿಂಗ್ ಸುರ್ಜೇವಾಲಾ ರವರನ್ನು ಹಿರಿಯ ಶಾಸಕರುಗಳು ಭೇಟಿ ಮಾಡಿ ಸಂಪುಟ ಪುನಾರಚಿಸಿ ನಮಗೆ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್ನ ಹಿರಿಯ ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಮಂತ್ರಿ ಸ್ಥಾನ ಬೇಡಿಕೆ ಇಡುವ ಬಗ್ಗೆ ಚರ್ಚೆ ನಡೆಸಿದ್ದರು. ಇದರ ಜತೆಗೆ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವವರು ಸಹ ಪ್ರತ್ಯೇಕ ಸಭೆ ನಡೆಸಿ ತಮಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಧಿವೇಶನ ಬಳಿಕ ದೆಹಲಿಗೆ ಹೋಗಲು ನಿರ್ಧರಿಸಿದ್ದರು.
ಆದರೆ ಅಧಿವೇಶನ ಸಂದರ್ಭದಲ್ಲೇ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದರಿಂದ ಈ ಶಾಸಕರುಗಳ ದೆಹಲಿ ಭೇಟಿ ಮುಂದಕ್ಕೆ ಹೋಗಿತ್ತು. ಈಗ ಉಪಚುನಾವಣೆಗಳು ಮುಗಿದಿರುವುದರಿಂದ ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿ ಭೇಟಿಗೆ ಮುಂದಾಗಿದ್ದಾರೆ.
ಜಯಚಂದ್ರ ಹೇಳಿಕೆ

ಹಿರಿಯ ಶಾಸಕರ ದೆಹಲಿ ಭೇಟಿ ಬಗ್ಗೆ ಖಚಿತಪಡಿಸಿದ ಶಾಸಕ ಟಿ.ಬಿ. ಜಯಚಂದ್ರ ಅವರು, ಯಾರ ನೇತೃತ್ವದಲ್ಲೂ ನಾವು ದೆಹಲಿಗೆ ಹೋಗುತ್ತಿಲ್ಲ. ಬಜೆಟ್ ಅಧಿವೇಶನ ನಡೆಯುವಾಗಲೇ ಹಿರಿಯ ಶಾಸಕರು ಸೇರಿ ಚರ್ಚೆ ಮಾಡಿದ್ದೆವು. ವರಿಷ್ಠರನ್ನು ಭೇಟಿ ಮಾಡಿ ಅವರ ಗಮನಕ್ಕೆ ಕೆಲ ವಿಚಾರ ತರಬೇಕು ಎಂದು ತೀರ್ಮಾನಿಸಿದ್ದೆವು. ಉಪಚುನಾವಣೆ ಹಿನ್ನೆಲೆಯಲ್ಲಿ ಅದು ಮುಂದೂಡಿಕೆಯಾಗಿತ್ತು. ನಾಳೆ ಅಥವಾ ನಾಡಿದ್ದು ಸಾಮೂಹಿಕವಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಮುಂದಿನ ಸಂಪುಟ ಪುನಾರಚನೆ ವೇಳೆ ನಮ್ಮನ್ನು ಪರಿಗಣಿಸಬೇಕು ಎಂದು ಮನವಿಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿಯವರನ್ನು ಭೇಟಿ ಮಾಡುತ್ತೇವೆ. ಎಷ್ಟು ಜನರಿಗೆ ಸಂಪುಟದಲ್ಲಿ ಅವಕಾಶ ಸಿಗುತ್ತದೋ ಗೊತ್ತಿಲ್ಲ. ಆದರೆ ನಾವು 40 ಶಾಸಕರು ನಾಳೆ ಇಲ್ಲವೇ ನಾಡಿದ್ದು ದೆಹಲಿಗೆ ಹೋಗುತ್ತೇವೆ. ಅನುಭವಿಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತೇವೆ. ಇಂಥವರನ್ನು ಸಚಿವ ಸ್ಥಾನದಿಂದ ಕೈ ಬಿಡಿ ಎಂದು ಹೇಳುವುದಿಲ್ಲ. ಹೈಕಮಾಂಡ್ ಎಲ್ಲವನ್ನು ತೀರ್ಮಾನಿಸುತ್ತದೆ ಎಂದರು.
ನಾಯಕತ್ವ ಬದಲಾವಣೆ: ಹೈಕಮಾಂಡ್ಗೆ ಸೇರಿದ್ದು,
ರಾಜ್ಯದಲ್ಲಿ ನಾಯಕತ್ವ ಬದಲಾವವಣೆ ವಿಚಾರದ ಬಗ್ಗೆ ಚರ್ಚಿಸಲು ನಾವು ದೆಹಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಟಿ.ಜಿ. ಜಯಚಂದ್ರ ಅವರು, ಹೈಕಮಾಂಡ್ ಜತೆ ಮಾತನಾಡುವಾಗ ಏನೆಲ್ಲಾ ಚರ್ಚೆ, ಪ್ರಶ್ನೆ, ಉದ್ಭವಿಸುತ್ತೋ ಅದನ್ನು ನೋಡಿಕೊಂಡು ಮಾತನಾಡುತ್ತೇವೆ ಎಂದರು.
ಪಕ್ಷದ ಗೊಂದಲ, ಕುರ್ಚಿ ಕದನದಿಂದ ಆಡಳಿತದ ಮೇಲೆ ಪರಿಣಾಮ ವಿಚಾರಗಳು ಚರ್ಚೆಗೆ ಬಂದರೆ ಆ ಬಗ್ಗೆಯೂ ವರಿಷ್ಠರ ಜತೆ ಮಾತನಾಡುತ್ತೇವೆ ಎಂದು ಅವರು ಹೇಳಿದರು.








