
ತುಮಕೂರು: ಹಿಂದೂ ಧರ್ಮ ಬದಲಾವಣೆಯಾಗಬೇಕು. ಜಾತಿಯ ವ್ಯವಸ್ಥೆ ದೇಶದಲ್ಲಿ ಹೋಗಬೇಕು. ಎಲ್ಲಿಯವರೆಗೆ ದೇಶದಲ್ಲಿ ಜಾತಿ ವ್ಯವಸ್ಥೆ ಹೋಗುವುದಿಲ್ಲವೋ ಅಲ್ಲಿಯವರೆಗೂ ದೇಶದ ಜನರು ಒಂದೇ ಎಂಬ ಭಾವನೆ ಬರುವುದಿಲ್ಲ. ಇದರಿಂದ ದೇಶದ ಪ್ರಗತಿಯೂ ಸಾಧ್ಯವಿಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ. ತುಮಕೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಾನಗರಪಾಲಿಕೆಯ ಅಂಬೇಡ್ಕರ್ ಪುತ್ಥಳಿ ಮುಂಭಾಗ ಮಂಗಳವಾರ ಆಯೋಜಿಸಿದ್ದ ಡಾ: ಬಿ.ಆರ್.ಅಂಬೇಡ್ಕರ್ ಅವರು 135ನೇ ಹಾಗೂ ಡಾ: ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆ ದಿನಗಳಲ್ಲಿ ಅಸಮಾನತೆ ಇರುವ ಹಿಂದೂ ಧರ್ಮದಲ್ಲಿ ನಾನು ಸಾಯುವುದಿಲ್ಲ ಎಂದು ಹೇಳಿ ಸಮಾನತೆಯನ್ನು ಸಾರುವ ಬೌದ್ಧ ಧರ್ಮಕ್ಕೆ ಮತಾಂತರವಾದರು. ಈ ಸಂದರ್ಭದಲ್ಲಿ ಅನೇಕರು ಟೀಕೆ ಮಾಡಿದರು. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ತಾರತಮ್ಯ ಇರುವ ಧರ್ಮದಲ್ಲಿ ಇರಲು ಬಯಸಲಿಲ್ಲ. ಜಾತಿಯತೆ ತೊಲಗಿದರಷ್ಟೇ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದರು.

ಭಾರತ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ಈ ದೇಶದಲ್ಲಿ ವರ್ಣಾಶ್ರಮ ಪದ್ಧತಿ ಹೇಗೆ ಬಂದಿದೆಯೋ ಗೊತ್ತಿಲ್ಲ, ಅದನ್ನೂ ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದ ಅಸಮಾನತೆಯ ಕಂದಕ ನಮ್ಮ ದೇಶದಲ್ಲಿದ್ದು, 5000 ವರ್ಷಗಳ ಇತಿಹಾಸದಲ್ಲಿ ಅಸಮಾನತೆಯ ತಾರತಮ್ಯವನ್ನು ಜನರು ಅನುಭವಿಸಿದ್ದಾರೆ.ಬಾಬಾ ಸಾಹೇಬರು ಮತ್ತು ಬಾಬು ಜಗಜೀವನರಾಮ್ ಅವರು ಈ ಅಸಮಾನತೆಯ ತಾರತಮ್ಯ ಅನುಭವಿಸಿದ ಇಬ್ಬರು ಮಹಾನ್ ನಾಯಕರು. ಹಂದಿ, ನಾಯಿಗಳು ಕುಡಿಯಬಹುದಾದ ಕೆರೆ ಕಟ್ಟೆಗಳನ್ನು ಶೋಷಿತರು ಮುಟ್ಟಬಾರದು ಎಂಬ ಈ ತಾರತಮ್ಯ ಅವರ ಮನಸ್ಸಿನಲ್ಲಿ ಆಳವಾಗಿ ಉಳಿದಿತ್ತು. ಮುಂದೆ ಭಾರತದ ಸಂವಿಧಾನ ರಚನೆ ಸಂದರ್ಭದಲ್ಲಿ ಅವರು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಪ್ರತಿಪಾದಿಸಿದರು. ಶ್ರೀಮಂತನಿಗೂ ಶ್ರೀಸಾಮಾನ್ಯನಿಗೂ ಒಂದೇ ಹಕ್ಕು ಎಂಬ ಮಹತ್ತರ ನಿರ್ಧಾರವನ್ನು ಸಂವಿಧಾನದಲ್ಲಿ ಅವರು ಕೊಟ್ಟಿದ್ದಾರೆ ಎಂದು ಸಚಿವರು ನುಡಿದರು.

ಡಾ.ಬಾಬು ಜಗಜೀವನರಾಮ್ ಅವರು ಸ್ವಾತಂತ್ರ‍್ಯ ಭಾರತದಲ್ಲಿ ಹಸಿರು ಕ್ರಾಂತಿ ಮೂಲಕ ದೇಶದ ಆಹಾರ ಸಮಸ್ಯೆಯನ್ನು ನೀಗಿಸಿದ್ದನ್ನು ನಾವು ಸ್ಮರಿಸಬೇಕು. ಸ್ವಾತಂತ್ರö್ಯ ಭಾರತದ ಅಂದಿನ ಸ್ಥಿತಿಯಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಅಷ್ಟೇನು ಸುಧಾರಣೆಯಿರಲಿಲ್ಲ. ಅಮೇರಿಕಾದಿಂದ ಮೆಕ್ಕೆಜೋಳ ತರಿಸಿಕೊಳ್ಳಲಾಗುತ್ತಿತ್ತು. ಆದರೆ, ಅಂದಿನ ಕೃಷಿ ಸಚಿವರಾಗಿದ್ದ ಡಾ: ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಮೂಲಕ ದೇಶವನ್ನು ಆಹಾರ ಸ್ವಾವಲಂಬಿ ರಾಷ್ಟçವಾಗಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಡತನ ನಿರ್ಮೂಲನ ಮಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಮೂಲಕ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆರಾಧಿಸದೆ, ಆದರ್ಶದ ಸ್ಪೂರ್ತಿ ಪಡೆಯಿರಿ: ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮೋಹನ್ ಚಂದ್ರಗುತ್ತಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಅನುಯಾಯಿಗಳು ಅವರನ್ನು ಆರಾಧಿಸುವುದು ಸರಿಯಲ್ಲ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಸಮುದಾಯಗಳನ್ನು ಜಾಗೃತರಾಗುವಂತೆ ಮಾಡಬೇಕೆಂದು ಪ್ರತಿಪಾದಿಸಿದರು.
ಪ್ರತಿಭಾಪುರಸ್ಕಾರ, ಸನ್ಮಾನ: ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಪೌರಕಾರ್ಮಿಕರು, 12 ಮಂದಿ ಸಾಧಕರಿಗೆ ಅಂಬೇಡ್ಕರ್ ಪ್ರಶಸ್ತಿ ಹಾಗೂ 10 ಮಂದಿ ಸಾಧಕರಿಗೆ ಡಾ: ಬಾಬು ಜಗಜೀವನರಾಂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಬೇಡ್ಕರ್ ಜೀವನ ಸಾಧನೆಯ ಟ್ಯಾಬ್ಲೊಗಳ ಮೆರವಣಿಗೆ, ಪ್ರದರ್ಶನ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಂದ್ರಶೇಖರಗೌಡ, ಉಪಾಧ್ಯಕ್ಷ ನರಸೀಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ., ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ತುಮಕೂರು ಉಪ ವಿಭಾಗಾಧಿಕಾರಿ ನಾಹೀದಾ ಜಮ್ ಜಮ್, ಜಿ.ಪಂ. ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಪ್ಪ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ತಹಸೀಲ್ದಾರ್ ರಾಜೇಶ್ವರಿ, ಪಿಯು ಡಿಡಿ ಬಾಲಗುರುಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನರಸಿಂಹ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮೀಸಲು ಅಂಬೇಡ್ಕರ್ ಅವರಿಂದಲೇ ಬುನಾದಿ
ಮಹಿಳೆಯರಿಗೂ ಸಮಾನ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಹಿಂದೂ ಕೋಡ್ ಬಿಲ್ ಮಸೂದೆಯನ್ನು ಸಂಸತ್ತಿನಲ್ಲಿ ಅಂಬೇಡ್ಕರ್ ಮೊದಲಿಗೆ ಮಂಡಿಸಿದರು.ಆದರೆ ಇದನ್ನು ಕೆಲವು ಸಂಸದರು ವಿರೋಧಿಸಿದ್ದರಿಂದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ರಾಜೀವ್‌ಗಾಂಧಿ ಪ್ರಧಾನಮಂತ್ರಿ ಆಗಿದ್ದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಕನಸನ್ನು ನನಸು ಮಾಡಿ ಎಲ್ಲಾ ಪಂಚಾಯತಿಗಳಲ್ಲಿ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಡಾ.ಮನಮೋಹನ್ ಸಿಂಗ್ ಪ್ರದಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಸನಸಭೆಗಳಲ್ಲೂ ಮಹಿಳಾ ಮೀಸಲಾತಿ ತರಲು ಮಸೂದೆ ಮಂಡಿಸಿದರು. ಆದರೆ ಅಂದಿನ ಸಂದರ್ಭದಲ್ಲಿ ರಾಜ್ಯ ಸಭೆಯಲ್ಲಿ ಈ ಮಸೂದೆ ಅಂಗೀಕಾರ ಆಗಲಿಲ್ಲ. ಇಂದಿನ ಕೇಂದ್ರ ಸರ್ಕಾರ ಈ ಮಸೂದೆಯನ್ನು ಪುನಃ ಮಂಡಿಸುತ್ತಿದೆ. ಇದನ್ನು ರಾಜ್ಯ ಸರ್ಕಾರದ ಪರವಾಗಿ ನಾವು ಸ್ವಾಗತಿಸುತ್ತೇವೆ. ಮಹಿಳೆಯರ ರಾಜಕೀಯ ಮೀಸಲಿಗಾಗಿ ಆರಂಭದಿAದಲೂ ಪ್ರಯತ್ನಿಸಿದ ಅಂಬೇಡ್ಕರ್ ಅವರನ್ನು ಮಹಿಳೆಯರು ಎಂದಿಗೂ ಮರೆಯಬಾರದೆಂದು ಪರಮೇಶ್ವರ್ ಕರೆಕೊಟ್ಟರು
ಡಾ.ಬಿ.ಆರ್.ಅಂಬೇಡ್ಕರ್ ಅವರು, ಕೇವಲ ಒಂದು ಜಾತಿಗೆ ಸೀಮಿತರಲ್ಲ, ದೇಶದ ಪ್ರತಿಯೊಬ್ಬರಿಗೂ ಅವರೇ ಸ್ಫೂರ್ತಿ. ದೇಶದ ಭಾಗ್ಯವಿಧಾತರೆನಿಸಿದ್ದಾರೆ.ಕೇಂದ್ರ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಉದ್ದೇಶದಿಂದ ಯುಪಿಐ ಪಾವತಿಗೆ ಭೀಮ್ ಆಪ್, ಹೆಸರನ್ನಿಟ್ಟು ಅಂಬೇಡ್ಕರ್ ಅವರ ನೆಲೆಗಳನ್ನು ಪಂಚ ಕ್ಷೇತ್ರಗಳ ಸ್ಮಾರಕವಾಗಿಸಿ ಅವರನ್ನು ಸದಾನೆನಪಿಸುವ ಹಾಗೂ ಗೌರವಿಸುವ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ರಾಜ್ಯ ಸರ್ಕಾರವೂ ಅಂಬೇಡ್ಕರ್ ಅವರ ಚಿರಸ್ಥಾಯಿಯಾಗಿಸಲು ಅನೇಕ ಕಾರ್ಯಕ್ರಮಮಾಡಿದೆ. ದೇಶದಲ್ಲಿರುವ ಅಸಮಾನತೆಯ ಪಿಡುಗನ್ನು ನಮ್ಮ ತಲೆ, ಮನಸ್ಸುನಿಂದ ತೆಗೆದುಹಾಕದಿದ್ದರೆ ದೊಡ್ಡ ಪ್ರಮಾದವಾಗುತ್ತದೆ.
-ಜಿ.ಬಿ.ಜ್ಯೋತಿಗಣೇಶ್, ಶಾಸಕರು, ತುಮಕೂರು ನಗರ.ಅಂಬೇಡ್ಕರ್, ಬಾಬೂಜಿ ಪ್ರಶಸ್ತಿ ನೀಡಿ ಸನ್ಮಾನ
ವಿವಿಧ ಕ್ಷೇತ್ರದ ಸಾಧಕರಾದ, ಎನ್.ನಟರಾಜ್, ಟಿ.ಸಿ.ಸುರೇಶ್, ರಂಗಸ್ವಾಮಿ, ಮಧುಗಿರಿ ಕಣಿಮಯ್ಯ, ನಾಗತಿಹಳ್ಳಿ ಕೃಷ್ಣಮೂರ್ತಿ, ಸತ್ಯಮೂರ್ತಿ, ಸೋಮಶೇಖರಯ್ಯ, ಮೆಳೆಕಲ್ಲಹಳ್ಳಿ ಯೋಗೀಶ್, ರಮೇಶ್‌ಕುಮಾರ್, ವಸಂತಕುಮಾರ್, ಟಿ.ನಾಗರಾಜು, ನಾಗರಾಜು, ಎನ್.ಕುಮಾರ್, ಬಿ.ಎನ್.ನಾಗರಾಜು, ಚಿಕ್ಕಮ್ಮ, ಚಂದ್ರಶೇಖರ್, ಶಂಕರ್, ಎಚ್.ಬಸವರಾಜು, ದೆವರಾಜು, ರಮೇಶ್, ಟಿ.ಹನುಮಂತರಾಯ, ಸಿದ್ದೇಶ್ ಅವರಿಗೆ ಜಿಲ್ಲಾಮಟ್ಟದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.








