
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ೧೬ ಮಂದಿ ಆರೋಪಿಗಳಿಗೆ ಕ್ಷಮಾದಾನವಿಲ್ಲದ ಜೀವನ ಪರ್ಯಂತ ಶಿಕ್ಷೆ ವಿಧಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತು.
ಪ್ರಕರಣದಲ್ಲಿ ೧೬ ಮಂದಿಯನ್ನು ಕೊಲೆ ಪ್ರಕರಣದಲ್ಲಿ ದೋಷಿಗಳು ಎಂದು ನಿರ್ಧರಿಸಿದ್ದು, ಶಿಕ್ಷೆಯ ಪ್ರಮಾಣ ನಿರ್ಧರಿಸುವುದಕ್ಕೆ ಸಂಬAಧಿಸಿದAತೆ ಖುದ್ದು ಅಪರಾಧಿಗಳು ಮತ್ತು ಅವರ ಪರ ವಕೀಲರ ವಾದವನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಸುದೀರ್ಘವಾಗಿ ಆಲಿಸಿ, ಶುಕ್ರವಾರ ತೀರ್ಪು ಪ್ರಕಟಿಸುವುದಾಗಿ ಹೇಳಿದರು.
ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರುವುದಿಲ್ಲ. ಬದಲಿಗೆ ಕ್ಷಮಾದಾನವಿಲ್ಲದ ಜೀವನ ಪರ್ಯಂತ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.
ಸಂತ್ರಸ್ತನಾದ ಯೋಗೀಶ್ ಗೌಡನ ಕಣ್ಣಿಗೆ ಕಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.
ವಿನಯ್ ಕುಲಕರ್ಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ಅವರು ವಿನಯ್ ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಗೆದ್ದಿದ್ದಾರೆ. ಮೂವರು ಮಕ್ಕಳಿದ್ದು, ೩,೫೦೦ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.
ನ್ಯಾಯಾಲಯದ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್ ಕುಲಕರ್ಣಿ ೨೭ ವರ್ಷದಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದು, ಅವರು ಮದುವೆಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್ ಚುನಾವನೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ನನಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.
೩,೫೦೦ ಹಸು/ಎಮ್ಮೆ ಇವೆ. ಅವುಗಳನ್ನು ನೋಡಬೇಕಿದೆ. ಈ ಪ್ರಕರಣದಿಂದಾಗಿ ನನ್ನ ಕ್ಷೇತ್ರದ ಜನರಿಗೂ ಅನ್ಯಾಯವಾಗಿದೆ. ಹೀಗಾಗಿ, ವಿನಾಯಿತಿ ತೋರಬೇಕು ಎಂದರು. ಎಲ್ಲಾ ಅಪರಾಧಿಗಳು ನ್ಯಾಯಾಲಯದ ಮುಂದೆ ತಮ್ಮ ಪರಿಸ್ಥಿತಿಗಳನ್ನು ವಿವರಿಸಿ, ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.








