ನವದೆಹಲಿ: ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಪಾಪದ ಕೆಲಸವನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾದ ಮರುದಿನವೇ ದೇಶವನ್ನು ಉದ್ದೇಶಿ ಪ್ರಧಾನಿ ಭಾಷಣ ಮಾಡಿ, ಸ್ವಾರ್ಥ ರಾಜಕೀಯಕ್ಕಾಗಿ ದೇಶದ ಮಹಿಳೆಯರ ಸಬಲೀಕರಣದ ಹೋರಾಟವನ್ನು ಸ್ಥಗಿತಗೊಳಿಸಿದ ವಿರೋಧ ಪಕ್ಷಗಳನ್ನು ಟೀಕಿಸಿದರು. ಇದೇ ವೇಳೆ ದೇಶದ ಎಲ್ಲ ಮಹಿಳೆಯರಿಗೆ ಕ್ಷಮೆಯಾಚಿಸಿದರು.

ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಸೇರಿ ಮಿತ್ರ ಪಕ್ಷಗಳು ನಮ್ಮ ಮಹಿಳಾ ಶಕ್ತಿಯ ವಿರುದ್ಧ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಏನು ಮಾಡಿವೆ ಎಂಬುದನ್ನು ದೇಶದ ಮಹಿಳೆಯರು ನೋಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಪ್ರತಿಪಕ್ಷಗಳು ಪಾಪ ಮಾಡಿವೆ ಮತ್ತು ಇದಕ್ಕಾಗಿ ಅವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಶುಕ್ರವಾರ ಸೋಲಾಗಿದೆ. ನಿನ್ನೆ ಮಸೂದೆ ಪರ ಕೇವಲ ೨೯೮ ಮತಗಳು ಬಿದ್ದರೆ, ಮಸೂದೆಯ ವಿರುದ್ಧವಾಗಿ ೨೩೦ ಮತಗಳು ಬಂದಿದ್ದವು. ಈ ಮೂಲಕ ಮತ ಚಲಾಯಿಸಿದ ೫೨೮ ಸದಸ್ಯರಲ್ಲಿ, ಬಹುಮತಕ್ಕೆ ಮೂರನೇ ಎರಡರಷ್ಟು ಅಂದರೆ ೩೫೨ ಮತಗಳ ಅಗತ್ಯವಿತ್ತು. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತವಿರಲಿಲ್ಲ. ಆದರೆ ಕೇವಲ ೨೯೮ ಮತಗಳು ಬಂದಿದ್ದರಿAದ ಮಸೂದೆಗೆ ಸೋಲಾಗಿತ್ತು. ಇದರೊಂದಿಗೆ ಸಂವಿಧಾನ ತಿದ್ದುಪಡಿ ಮಸೂದೆ ಮೂಲಕ ೨೦೨೯ರಲ್ಲಿ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಜಾರಿಗೊಳಿಸುವ ಮತ್ತು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿತ್ತು.

ನಿಮ್ಮ ನೋವು ಮತ್ತು ನಿರಾಶೆಯಲ್ಲಿ ನಾನು ಸಹ ಭಾಗಿಯಾಗಿದ್ದೇನೆ. ಇಂದು ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ೬೬ ಪ್ರತಿಶತ ಮತಗಳನ್ನು ನಾವು ಪಡೆಯದಿದ್ದರೂ ಮಹಿಳಾ ಶಕ್ತಿಯ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದ ನಮ್ಮೊಂದಿಗೆ ಇದೆ ಎಂದು ನನಗೆ ತಿಳಿದಿದೆ. ನಿನ್ನೆ, ನಮಗೆ ಸಂಖ್ಯಾಬಲವಿರಲಿಲ್ಲ. ಆದರೆ ಅದರರ್ಥ ನಾವು ಸೋತಿದ್ದೇವೆ ಎಂದಲ್ಲ? ಎಂದು ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ ಈ ರಾಜಕೀಯವನ್ನು ಬ್ರಿಟಿಷರಿಂದ ಆನುವಂಶಿಕವಾಗಿ ಪಡೆದುಕೊಂಡಿದೆ. ಕಾಂಗ್ರೆಸ್ ಇಂದಿಗೂ ಅದೇ ಊರುಗೋಲಿನ ಮೇಲೆಯೇ ನಡೆಯುತ್ತಿದೆ. ದೇಶದಲ್ಲಿ ವಿಭಜನೆಗಳನ್ನು ಸೃಷ್ಟಿಸುವ ಭಾವನೆಗಳನ್ನು ಕಾಂಗ್ರೆಸ್ ಯಾವಾಗಲೂ ಪ್ರಚೋದಿಸುತ್ತಿದೆ. ಅದಕ್ಕಾಗಿಯೇ ಗಡಿ ನಿರ್ಣಯ ಅಥವಾ ಪುನರ್ವಿಂಗಡಣೆ ಕೆಲವು ರಾಜ್ಯಗಳಿಗೆ ಹಾನಿ ಮಾಡುತ್ತದೆ ಎಂಬ ಸುಳ್ಳನ್ನು ಹರಡಲಾಯಿತು ಎಂದು ಅವರು ಆರೋಪಿಸಿದ್ದಾರೆ.

ಮಹಿಳಾ ಮಸೂದೆ ಸೋಲಿಗೆ ಕಾಂಗ್ರೆಸ್, ಡಿಎಂಕೆ ಕಾರಣ

ತಮ್ಮ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳಿಂದ “ಹಳಿತಪ್ಪಿದೆ”. ಮಸೂದೆ ಸೋಲಿಗೆ ಪ್ರತಿಪಕ್ಷಗಳೇ ಕಾರಣ. ಸಾಮಾನ್ಯ ಮಹಿಳೆಯರು ಏಳಿಗೆ ಹೊಂದುವುದರಿAದ ಡಿಎಂಕೆ, ಕಾಂಗ್ರೆಸ್‌ಗೆ ಹೇಗೆ ತೊಂದರೆಯಾಗುತ್ತದೆ?. ಮಸೂದೆಯನ್ನು ಬೆಂಬಲಿಸುವAತೆ ವಿರೋಧ ಪಕ್ಷಗಳಿಗೆ ನಾನು ವೈಯಕ್ತಿಕವಾಗಿ ಮನವಿ ಮಾಡಿದ್ದೆ. ಸಾಮಾನ್ಯ ಕುಟುಂಬಗಳ ಸಹೋದರಿಯರು ಮಾತ್ರ ಸಂಸತ್ತು ಮತ್ತು ವಿಧಾನಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.