
ಬೆಂಗಳೂರು: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿ ಮೇಲೆ ದರ್ಪ, ತಾರತಮ್ಯವೆಸಗುತ್ತಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಮಯ ನೀಡುವಂತೆ ಕೋರಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಎಸ್ಪಿ ಎಸ್.ಎಸ್. ಕಾಶಿ ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ.
ಏ.15ರಿಂದ 29ರ ವರೆಗೆ ಎಂದಾದರೂ ಅರ್ಧ ಗಂಟೆ ಸಮಯ ನೀಡಿದರೆ ಪೊಲೀಸ್ ಸಿಬ್ಬಂದಿ ಮೇಲೆ ಕೆಲ ಐಪಿಎಸ್ ಅಧಿಕಾರಿಗಳು ಎಸಗುತ್ತಿರುವ ತಾರತಮ್ಯ, ಸ್ವಜನಪಕ್ಷಪಾತವೆಸಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡುವೆ ಎಂದು ಪತ್ರದಲ್ಲಿ ಎಸ್ಪಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?: ಅನ್ಯ ರಾಜ್ಯಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಐಪಿಎಸ್ ಅಧಿಕಾರಿಗಳು, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾಗಿದ್ಧಾರೆ. ತಮ್ಮ ಅಧೀನದ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಿರುಕುಳ ಹಾಗೂ ದೌರ್ಜನ್ಯವೆಸಗಿದ್ದು, ಈ ಬಗ್ಗೆ ಎಳೆಎಳೆಯಾಗಿ ವಿವರಿಸುವ ಉದ್ದೇಶವಿದೆ ಎಂದು ಪತ್ರದಲ್ಲಿ ಎಸ್ಪಿ ಹೇಳಿದ್ದಾರೆ.
ಮೇಲಧಿಕಾರಿಗಳ ವಿರುದ್ಧ ಇನ್ಸ್ಪೆಕ್ಟರ್ ದೂರು: ನಗರ ಪಶ್ಚಿಮ ವಲಯದ ಇನ್ಸ್ಪೆಕ್ಟರ್ ಶ್ರೀನಿವಾಸ್ ಟಿ.ಆರ್. ಎಂಬವರು ಡಿಸಿಆರ್ಇ ಆಡಳಿತ ವಿಭಾಗದ ಎಸ್ಪಿ ಕರಿಬಸವನಗೌಡ ಹಾಗೂ ಡಿವೈಎಸ್ಪಿ ಮಹೇಶ್ವರಗೌಡ ಎಂಬವವರ ವಿರುದ್ಧ ಡಿಜಿಪಿಗೆ 18 ಅಂಶಗಳ ದೂರು ನೀಡಿದ್ದಾರೆ.
ಈ ಬಗ್ಗೆ ಮೊಬೈಲ್ನಲ್ಲಿ ವಿಡಿಯೋ ಮಾಡಿ ತಮಗಾಗಿರುವ ಅನ್ಯಾಯದ ಕುರಿತು ಮಾತನಾಡಿದ್ದು, ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ದಲಿತರ ವಿರುದ್ಧವಾಗಿ ಮೇಲ್ವರ್ಗದವರ ಪರವಾಗಿ ಪ್ರಕರಣಗಳನ್ನು ಮುಗಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಕರ್ತವ್ಯದಿಂದ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ತನಗೆ ಯಾವುದೇ ರೀತಿ ಮಾಹಿತಿ ನೀಡಿಲ್ಲ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಕರ್ತವ್ಯ ಸ್ಥಳದಿಂದ ಬಿಡುಗಡೆಗೊಳಿಸದಂತೆ ಆದೇಶವಿದ್ದರೂ ತರಾತುರಿಯಲ್ಲಿ ಉಡುಪಿ ಜಿಲ್ಲಾ ಡಿಸಿಆರ್ಇಗೆ ಬಿಡುಗಡೆ ಮಾಡುವಂತೆ ಡಿಜಿ ಅವರಿಗೆ ಇಮೇಲ್ ಮಾಡುವ ಮೂಲಕ ತನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿನಲ್ಲಿ ಇನ್ಸ್ಪೆಕ್ಟರ್ ಆರೋಪಿಸಿದ್ದಾರೆ.
ತಮ್ಮ ಮೇಲಿನ ಆರೋಪ ಸುಳ್ಳು- ಕರಿಬಸವನಗೌಡ: ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಡಳಿತ ವಿಭಾಗದ ಎಸ್ಪಿ ಕರಿಬಸವನಗೌಡ ಅವರು, ತನ್ನ ಮೇಲಿನ ಆರೋಪ ಶುದ್ಧ ಸುಳ್ಳಾಗಿದೆ. ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರು ಡಿಸಿಆರ್ಇ ಘಟಕದ ಎಸ್ಪಿ ಎಸ್.ಎಸ್.ಕಾಶಿ ಅವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಈವರೆಗೂ ಅವರು ನನ್ನನ್ನು ಭೇಟಿ ಮಾಡಿಲ್ಲ. ಎಸ್ಪಿ ಕೇಂದ್ರ ಪ್ರಕರಣದ ತನಿಖೆಯ ಕುರಿತು ಅಂತಿಮ ವರದಿ ಬಂದಾಗ, ನಾನು ಅದನ್ನು ಐಜಿಪಿ ಅವರಿಗೆ ಕಳಿಸುತ್ತೇನೆ. ಡಿಐಜಿಪಿಯಿಂದ ಕಾನೂನು ಘಟಕದ ಅಧಿಕಾರಿಗೆ ಕಳುಹಿಸಿ ಅಭಿಪ್ರಾಯ ಬಂದ ಬಳಿಕ ಡಿಜಿಪಿ ನಿರ್ಧಾರ ಕೈಗೊಳ್ಳುತ್ತಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ಧಾರೆ.








