![]()
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ 2002 (ಪಿಎಂಎಲ್ಎ) ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರರಾದ ಮೊಹಮ್ಮದ್ ನಲಪಾಡ್, ಓಮರ್ ಫಾರೂಕ್ ನಲಪಾಡ್ ಮನೆ ಸೇರಿದಂತೆ ರಾಜ್ಯದ 12 ಕಡೆಗಳಲ್ಲಿ ಜಾರಿ ನಿರ್ದೇಶಾನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೋಮವಾರ ಬೆಳ್ಳಂಬೆಳಗ್ಗೆ 6.30ರ ಸುಮಾರಿಗೆ ಇ.ಡಿ.ಅಧಿಕಾರಿಗಳ ತಂಡವು ನಗರದ ಮೆಗ್ರಾತ್ ರಸ್ತೆಯಲ್ಲಿರುವ ಶಾಸಕ ಮೊಹಮ್ಮದ್ ಹ್ಯಾರಿಸ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶ್ರೀಕಿಯೊಂದಿಗೆ ನಂಟು ಬೆಸೆದುಕೊಂಡ ಆರೋಪ ಸಂಬಂಧ ಶಾಸಕರ ಪುತ್ರರಾದ ಮೊಹಮ್ಮದ್ ನಲಪಾಡ್, ಓಮರ್ ಫಾರೂಕ್ ನಲಪಾಡ್, ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಅಖೀಬ್ ಖಾನ್ ಮನೆ ಹಾಗೂ ಇತರೆ ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿದ್ದಂತೆ 2023ರ ಜೂನ್ 30ರಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಕಾಟನ್ ಪೇಟೆ, ಕೆ.ಜಿ.ನಗರ, ಅಶೋಕ ನಗರ ಹಾಗೂ ಸಿಐಡಿ ಸೈಬರ್ ಕ್ರೈಂ ಸೇರಿದಂತೆ ಒಟ್ಟು 9 ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಎಸ್ಐಟಿ ದೋಷಾರೋಪಪಟ್ಟಿ ಸಲ್ಲಿಸಿವೆ.
ಆರೋಪಿ ಶ್ರೀಕಿ ಅಂತಾರಾಷ್ಟ್ರದ ಮಟ್ಟದ ಜಾಲತಾಣಗಳು, ಗೇಮಿಂಗ್ ಆ್ಯಪ್ ಗಳನ್ನ ಹ್ಯಾಕ್ ಮಾಡಿ ಕ್ರಿಪ್ಟೊ ಕರೆನ್ಸಿಯಲ್ಲಿರುವ ಹಣ ಲಪಾಟಿಸಿದ, ಇದರಲ್ಲಿ ಅಡಕವಾಗಿದ್ದ ದತ್ತಾಂಗಳನ್ನ ಕದ್ದು, ಹಣಕ್ಕಾಗಿ ಮಾರಾಟ, ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪ ಇದೆ. ಈ ಹಣವನ್ನ ಇತರೆ ಆರೋಪಿಗಳು ಹಣ ಹಂಚಿಕೊಳ್ಳುತ್ತಿದ್ದರು ಎಂಬ ಆರೋಪ ಸಂಬಂಧ ದಾಳಿ ನಡೆಸಿರುವ ಇ.ಡಿ. ಪರಿಶೀಲನೆ ಕಾರ್ಯ ಮುಂದುವರೆಸಿದೆ.







