
ಬೆಂಗಳೂರು : 2026-27 ನೇ ಬಜೆಟ್ ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೆ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಜೆಟ್ ನಲ್ಲಿ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದಾಗಿದೆ. ಕಳೆದ ವರ್ಷದ ಬಜೆಟ್ ನಲ್ಲಿನ 15 ಘೋಷಣೆಗಳ ಜಾರಿ ಇನ್ನೂ ಆಗಿಲ್ಲ. ಇದಕ್ಕೆ ಯಾರು ಹೊಣೆ? ಈ ವರ್ಷದ ಬಜೆಟ್ನಲ್ಲಿ 218 ಹೊಸ ಘೋಷಣೆಗಳು ಸೇರಿದಂತೆ ಒಟ್ಟಾರೆ 565 ಘೋಷಣೆಗಳನ್ನು ಮಾಡಿದ್ದೇವೆ. ಬಜೆಟ್ ನ ಎಲ್ಲಾ ಘೋಷಣೆಗಳನ್ನು ಅದೇ ವರ್ಷ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೆ ಇರಬಾರದು. ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದರು.
ಅಧಿಕಾರಿಗಳು ಯಾವತ್ತೂ ಸರ್ಕಾರಕ್ಕೆ ತಪು ಮಾಹಿತಿಯನ್ನು ನೀಡಬಾರದು ಹಾಗೂ ತಪುö್ಪ ಹಾದಿಗೆ ಎಳೆಯಬಾರದು. ನಮ್ಮ ನಿಲುವುಗಳು, ತೀರ್ಮಾನಗಳು ಯಾವತ್ತೂ ಜನಪರವಾಗಿರಬೇಕು. ಅಧಿಕಾರಿಗಳು 30-35 ವರ್ಷಗಳ ಕಾಲ ಆಡಳಿತ ವ್ಯವಸ್ಥೆಯಲ್ಲಿದ್ದರೆ, ಜನಪ್ರತಿನಿಧಿಗಳು ಕೇವಲ 5 ವರ್ಷಗಳ ಕಾಲ ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಎರಡು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15334 ಸ್ವೀಕೃತಿಗಳ ಪೈಕಿ 15295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.
ಸಾರ್ವಜನಿಕ ಕುಂದುಕೊರತೆ ಅಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. 1828 ಅರ್ಜಿಗಳ ವಿಲೇವಾರಿ ನಿಗದಿತ ಕಾಲಾವಧಿ ಮುಗಿದಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು.
ವಿವಿಧ ಕೇಂದ್ರ ಪುರಸ್ಕöÈತ ಕಾರ್ಯಕ್ರಮಗಳಡಿಯಲ್ಲಿ 2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ರೂ. 22,768 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ರೂ. 16,729 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದಿAದ ರೂ.11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ. ಈ ಅವಧಿಯಲ್ಲಿ ಒಟ್ಟಾರೆ ರೂ.42222 ಕೋಟಿ ಲಭ್ಯ ಅನುದಾನವಿದ್ದು, ರೂ.38,236 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನವನ್ನು ನಿಗದಿತ ಅವಧಿಯ ಒಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು.
ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.2 ಕೋಟಿವರೆಗೆ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಒಟ್ಟು ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿAದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಮಾಡಬಾರದು.
ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಲು ಹೋಗಬಾರದು, ಇದು ಸರ್ವಾಧಿಕಾರಕ್ಕೆ ಹಾದಿ ಮಾಡುತ್ತದೆ? ಎಂದು ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಅದರಂತೆ ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ. ಸಚಿವರಿಗೆ ಕಾನೂನಿನ ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕಾರ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಆಡಳಿತಕ್ಕೆ ಇನ್ನಷ್ಟು ಚುರುಕು ಮೂಡಿಸಬೇಕು ಎಂದು ಸೂಚನೆ ನೀಡಿದರು.
ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಂಬAಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ ಬಾಕಿಯಿರುವ 32132 ಹುದ್ದೆಗಳಿವೆ. ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ








