![]()
ಬೆಂಗಳೂರು: ಆಫ್ರಿಕಾದ ದೇಶಗಳಲ್ಲಿ ತಾಂಡವವಾಡುತ್ತಿರುವ ಎಬೋಲಾ ವೈರಸ್ ಕರ್ನಾಟಕಕ್ಕೂ ವಕ್ಕರಿಸುವ ಭೀತಿ ಇತ್ತು. 28 ವರ್ಷದ ಉಗಾಂಡಾ ಮಹಿಳೆಯಲ್ಲಿ ಈ ವೈರಸ್ನ ಲಕ್ಷಣಗಳಿದ್ದವು. ತಕ್ಷಣವೇ ಅವರನ್ನು ಕ್ವಾರಂಟೈನ್ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಹಿಳೆಗೆ ಸೋಂಕು ಇದೆಯೇ ಎಂಬ ಬಗ್ಗೆ ನಡೆಸಲಾದ ಪರೀಕ್ಷೆಯಲ್ಲಿ ವರದಿಯು ನೆಗೆಟಿವ್ ಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ.
ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ. ಮಹಿಳೆಯ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಸೋಂಕು ಅಂಟಿಲ್ಲ ಎಂದು ವರದಿ ಬಂದಿದೆ.
ಮಾಹಿತಿ ನೀಡಿದ ಆರೋಗ್ಯ ಸಚಿವರು: ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಗಾಂಡಾ ಮಹಿಳೆಯ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ. ಮಾರಕ ವೈರಸ್ ರಾಜ್ಯವನ್ನು ವಕ್ಕರಿಸಿತು ಎಂಬ ಆತಂಕ ಮೂಡಿಸಿತ್ತು. ನೆಗೆಟಿವ್ ವರದಿಯು ಸರ್ಕಾರ ಮತ್ತು ಜನರಿಗೆ ದೊಡ್ಡ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.
ಸದ್ಯ ಉಗಾಂಡಾ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನೆಗೆಟಿವ್ ವರದಿ ಬಂದ ನಂತರ, ಅವರನ್ನು ಆಸ್ಪತ್ರೆಯಿಂದ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದಾರೆ.
ಈ ಅವಧಿಯಲ್ಲಿ, ಆರೋಗ್ಯ ಇಲಾಖೆ ಮಹಿಳೆಯ ಮೇಲೆ ನಿಗಾ ವಹಿಸಲಿದೆ. ಮತ್ತೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಅವರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗುವುದು. ಹೊಸ ಲಕ್ಷಣಗಳು ಕಂಡುಬಂದರೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಪ್ರಯೋಗಾಲಯದಲ್ಲಿ ಎರಡನೇ ಸಲ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀತಿ ಹುಟ್ಟಿಸಿದ್ದ ಪ್ರಕರಣ: ಉಗಾಂಡಾದ ಕಂಪಾಲಾದ ನಗಿರೆ ಲತೀಫಾ ಎಂದು ಗುರುತಿಸಲಾದ ಮಹಿಳೆ ಮೇ 23 ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಎಬೋಲಾ ಹೋಲುವ ಲಕ್ಷಣಗಳು ಕಂಡುಬಂದ ನಂತರ ಆರೋಗ್ಯ ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಲಾಖೆ ಅಧಿಕಾರಿಗಳು ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಿ ಪ್ರತ್ಯೇಕವಾಗಿ ಇಡಲಾಗಿತ್ತು. ಪರೀಕ್ಷೆಗಾಗಿ ರಕ್ತ ಮತ್ತು ಇತರೆ ಮಾದರಿಗಳನ್ನು ಸಂಗ್ರಹಿಸಿಡಲಾಗಿತ್ತು. ಶಂಕಿತ ಎಬೋಲಾ ಪ್ರಕರಣದ ಸುದ್ದಿ ಹೊರಬಿದ್ದ ನಂತರ ರಾಜ್ಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿತ್ತು.







