
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬ ಊಹಾಪೋಹಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಶುಕ್ರವಾರ ತಳ್ಳಿಹಾಕಿದರು. ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಜೊತೆಗಿನ ಚರ್ಚೆಗಳ ಬಳಿಕ ದೆಹಲಿಯಿಂದ ಮರಳಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪಕ್ಷದ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಾನು ಈಗಾಗಲೇ ಹೇಳಿದ್ದೇನೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಅವರು ಪಕ್ಷದೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆಯೋ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ನನಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದರು.
ತಾವು ಸಚಿವ ಸಚಿವ ಸ್ಥಾನ ಆಕಾಂಕ್ಷಿಯಲ್ಲವೆAದು ಸ್ಪಷ್ಟಪಡಿಸಿದ ಅವರು, ಸಚಿವ ಸಂಪುಟ ರಚನೆ ಕುರಿತ ಚರ್ಚೆಗಳು ಇನ್ನೂ ಆರಂಭವಾಗಿಲ್ಲ ಎಂದು ಹೇಳಿದರು. ನಾನು ಸ್ವತಃ ಯಾವುದೇ ಹುದ್ದೆಯ ಆಸೆಪಡುವವನಲ್ಲ. ಚರ್ಚೆಗಳು ಇನ್ನೂ ಆರಂಭವಾಗಿಲ್ಲ. ಚರ್ಚೆಗಳು ನಡೆದಾಗ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಏನು ಚರ್ಚಿಸಿದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಹೊಸ ಸರ್ಕಾರದ ಸಾಧ್ಯತೆಯ ರಚನೆ ಕುರಿತು ಮಾತನಾಡಿದ ಜಾರಕಿಹೊಳಿ, ಎಷ್ಟು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ನಾಳೆ ಸಂಜೆ ವೇಳೆಗೆ ಎಲ್ಲವೂ ಸ್ಪಷ್ಟವಾಗುವ ನಿರೀಕ್ಷೆಯಿದೆ ಎಂದರು.
ಎಷ್ಟು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗುತ್ತದೆ ಅಥವಾ ಇಲ್ಲ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾವು ಕಾಯಬೇಕಾಗಿದೆ. ನಾಳೆ ಸಂಜೆ ವೇಳೆಗೆ ಎಲ್ಲವೂ ಸಂಪೂರ್ಣ ಸ್ಪಷ್ಟವಾಗುತ್ತದೆ. ಸಿದ್ಧತೆಗಳು ಸರಳವಾಗಿರುತ್ತವೆ, ಅದರಲ್ಲಿ ವಿಶೇಷವೇನೂ ಇಲ್ಲ. ಬಹುಶಃ ಸೋಮವಾರದೊಳಗೆ ಪ್ರಕ್ರಿಯೆ ಮುಗಿಯಬಹುದು. ಸೋಮವಾರದೊಳಗೆ ಅಥವಾ ಗರಿಷ್ಠ ಮಂಗಳವಾರದೊಳಗೆ ಅಂತಿಮಗೊಳ್ಳುತ್ತದೆ ಎಂದು ಕೇಳಿದ್ದೇವೆ ಎಂದರು.








