ಸಿದ್ದರಾಮಯ್ಯ ಪದತ್ಯಾಗ : ಗಳಗಳನೆ ಕಣ್ಣೀರಿಟ್ಟ ಸಚಿವ ಸುಧಾಕರ್

ದಾವಣಗೆರೆ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಪದತ್ಯಾಗ ಮಾಡಿದ ಹಿನ್ನಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಗಳಗಳನೆ ಕಣ್ಣೀರು ಹಾಕಿದರು.

ಯುಬಿಡಿಟಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ದಾವಣಗೆರೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ರಾಜಕಾರಣದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು. ಒಬ್ಬ ರಾಜಕಾರಣಿಯ ವ್ಯಕ್ತಿತ್ವ ಹೇಗಿರುತ್ತೆ ಎನ್ನುವುದನ್ನು ಸಿದ್ದರಾಮಯ್ಯ ತಿಳಿಸಿಕೊಟ್ಟರು. ಇದರಿಂದ ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ವರ್ಚಸ್ಸು ಕೂಡ ಸಾಕಷ್ಟು ವೃದ್ಧಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಅವರ ಅನುಭವ ಹೇಳಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಆಗಿಲ್ಲ. ಮುಂದಿನ ದಿನಗಳಲ್ಲಿ ಶಾಸಕಾಂಗ ಸಭೆ ನಡೆದು, ಅಧಿಕೃತವಾಗಿ ಡಿಕೆಶಿಯವರು ಸಿಎಂ ಆಗುತ್ತಾರೆ. ಡಿಕೆಶಿಯವರು ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ, ಅತಂಕವಿಲ್ಲ” ಎಂದು ತಿಳಿಸಿದರು.
ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, “ಪಕ್ಷಕ್ಕಾಗಿ ಡಿಕೆಶಿಯವರು ಸಾಕಷ್ಟು ದುಡಿದಿದ್ದಾರೆ. ಆದ್ದರಿಂದ ಹೈಕಮಾಂಡ್ ಈ ಬಾರಿ ಅವರಿಗೆ ಸಿಎಂ ಆಗಲು ಅವಕಾಶ ನೀಡಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ. ಡಿಕೆಶಿಯವರು ಸಿಎಂ ಆಗಲು ಯಾರ ವಿರೋಧವೂ ಇಲ್ಲ. ಸ್ವತಃ ಸಿದ್ದರಾಮಯ್ಯನವರೇ ಬೆಂಬಲ ಸೂಚಿಸಿದ್ದಾರೆ. ೨೦೨೮ಕ್ಕೆ ಒಟ್ಟಾಗಿ ಶ್ರಮಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂದಾಗುತ್ತೇವೆ” ಎಂದಿರುವುದಾಗಿ ಹೇಳಿದರು.

“ಕೆಪಿಸಿಸಿ ಅಧ್ಯಕ್ಷರಾಗಲು ಸತೀಶ್ ಜಾರಕಿಹೊಳಿ ಅವರಿಗೆ ಸಾಮರ್ಥ್ಯ ಇದೆ. ಅವರೇ ನಾನು ಕೆಪಿಸಿಸಿ ಸಾರಥ್ಯ ವಹಿಸುತ್ತೇನೆ ಎಂದು ಹೇಳಿದ್ದಾರೆ. ಉಪಚುನಾವಣೆಯ ಜವಾಬ್ದಾರಿ ವಹಿಸಿಕೊಂಡು ಗೆಲ್ಲಿಸಿಕೊಂಡು ಬಂದಿದ್ದಾರೆ. ಆಡಂಬರದ ಸಂಘಟನೆ ಅಲ್ಲ, ಸೈಲೆಂಟ್ ಆಗಿ ಸಂಘಟನೆ ಮಾಡಿ ಯಶಸ್ವಿಯಾಗುತ್ತಾರೆ. ಕೆಪಿಸಿಸಿ ಅದ್ಯಕ್ಷರಾಗಲು ಅವರಿಗೆ ಯೋಗ್ಯತೆ ಇದೆ. ಅವರು ಅಧ್ಯಕ್ಷರಾದರೆ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಾರೆ” ಎಂದರು.

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ ಎಂಬ ಪ್ರಹ್ಲಾದ ಜೋಶಿ ಹೇಳಿಕೆಗೆ, “ಪ್ರಹ್ಲಾದ ಜೋಶಿಯವರು ಕೆಲ ತಿಂಗಳ ಹಿಂದೆ ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲ ಮಾತಾಡಿದ್ರು ಅನ್ನೋದು ಗೊತ್ತಿದೆ. ಈಗ ಅನುಕಂಪ, ಕರುಣೆ ತೋರಿಸೋದು ರಾಜಕೀಯ ಉದ್ದೇಶ ಮಾತ್ರ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರನ್ನು ಕೆಟ್ಡದಾಗಿ ನಡೆಸಿಕೊಂಡಿಲ್ಲ. ಸಿಎಂ ಬದಲಾವಣೆ ವಿಚಾರ ಕಳೆದ ಆರೇಳು ತಿಂಗಳಿAದ ನಡೆಯುತ್ತಿರುವ ಪ್ರಕ್ರಿಯೆ. ಯಡಿಯೂರಪ್ಪನವರನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಯಾವ ರೀತಿ ಒತ್ತಡ ಹಾಕಿದ್ರಿ ಎನ್ನುವುದು ಗೊತ್ತಿದೆ. ಯಡಿಯೂರಪ್ಪನವರು ಕಣ್ಣೀರು ಹಾಕಿಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು. ಆ ರೀತಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡಿಲ್ಲ. ಬಿಜೆಪಿಯವರ ಕನಸು ನುಚ್ಚುನೂರಾಗಿದ್ದಕ್ಕೆ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

Recent Articles

spot_img

Related Stories

Share via
Copy link