ಸಮಾಜ ಕಲ್ಯಾಣ ಖಾತೆಗೆ ಸತೀಶ್ ಜಾರಕಿಹೊಳಿ ಪಟ್ಟು?!

ಬೆಂಗಳೂರು : ಖಾತೆಗಾಗಿ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ ಬಳಿಕ ಮತ್ತೊಬ್ಬ ಸಚಿವರು ಸಿಡಿಮಿಡಿಗೊಳ್ಳುತ್ತಿದ್ದು, ಸಮಾಜ ಕಲ್ಯಾಣ ಖಾತೆಗಾಗಿ ಸತೀಶ್ ಜಾರಕಿಹೊಳಿ ಪಟ್ಟುಹಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಜಾರಕಿಹೊಳಿ ಲೋಕೋಪಯೋಗಿ ಖಾತೆ ಜೊತೆಗೆ ಅಥವಾ ಬದಲಾಗಿ ಸಮಾಜಕಲ್ಯಾಣ ಖಾತೆ ನೀಡುವಂತೆ ಒತ್ತಡ ಹೇರಿದ್ದು, ಕಾಂಗ್ರೆಸ್‌ಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಮಾಜ ಕಲ್ಯಾಣ ಖಾತೆಯ ಮೇಲೆ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಕಣ್ಣಿಟ್ಟಿದ್ದಾರೆ. ನಮಗೂ ಅದೇ ಖಾತೆ ಬೇಕೆಂದು ಸತೀಶ್ ಜಾರಕಿಹೊಳಿ, ಹೈಕಮಾಂಡ್ ಅವರ ಮುಂದೆ ಒತ್ತಡ ಹೇರಿರುವುದಾಗಿ ತಿಳಿದು ಬಂದಿದೆ.

ಸಮಾಜ ಕಲ್ಯಾಣ ಇಲಾಖೆ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಖಾತೆಯಾಗಿದೆ. ಸುಮಾರು 42 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಬೇರೆ ಬೇರೆ ಇಲಾಖೆಗಳ ಮೂಲಕ ಖರ್ಚಾಗುತ್ತಿದೆ. ಎಸ್‌ಇಪಿ-ಟಿಎಸ್‌ಪಿ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ನೆರವು ದೊರೆಯುತ್ತಿದೆ. ಜೊತೆಗೆ ಅತ್ಯಂತ ಪ್ರಭಾವ ಶಾಲಿಯಾಗಿ ಕೆಲಸ ಮಾಡಲು ಅವಕಾಶಗಳಿವೆ.

ಇದಕ್ಕಾಗಿಯೇ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ಸಮಾಜ ಕಲ್ಯಾಣ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ. ಸಂಪುಟದಲ್ಲಿ ಇನ್ನೂ 20 ಸ್ಥಾನಗಳು ಖಾಲಿಯಿದ್ದು, ವಿಸ್ತರಣೆಯ ಬಳಿಕ ಸಂಪುಟ ಸೇರಲಿರುವ ಪ್ರಭಾವಿಯೊಬ್ಬರಿಗೆ ಸಮಾಜ ಕಲ್ಯಾಣ ಖಾತೆ ನೀಡಲು ಕಾಯ್ದಿರಿಸಲಾಗಿದೆ.

ಆದರೆ ಇದನ್ನು ಒಪ್ಪದ ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಮತ್ತಿತರರು ಶೋಷಿತ ಸಮುದಾಯದ ಹಿನ್ನೆಲೆಯಿಂದ ಬಂದವರಿಗೆ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈವರೆಗೂ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡದ ಸತೀಶ್ ಜಾರಕಿಹೊಳಿ, ಆಂತರಿಕವಾಗಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಒತ್ತಾಯ ಮಂಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ ನೀಡಿದ ಬಹಿರಂಗ ಹೇಳಿಕೆಗಳಿಂದ, ಈಗಾಗಲೇ ಪಕ್ಷ ಸಾಕಷ್ಟು ಮುಜುಗರ ಅನುಭವಿಸಿದೆ. ಸತೀಶ್ ಜಾರಕಿಹೊಳಿ ಕೂಡ ತಮ್ಮ ಅಸಮಾಧಾನ ಹೊರ ಹಾಕಿದರೆ, ಈ ಎಲ್ಲಾ ಬೆಳವಣಿಗೆಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪವಿದೆ ಎಂಬ ಅನುಮಾನಗಳು ದಟ್ಟವಾಗಲಾರಂಭಿಸುತ್ತವೆ.

ಸತೀಶ್ ಜಾರಕಿಹೊಳಿ ಆರಂಭದಿAದಲೂ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದಾರೆ. ಹೈಕಮಾಂಡ್ ರಾಜ್ಯ ನಾಯಕತ್ವದ ಗೊಂದಲ ಬಗೆ ಹರಿಸಬೇಕು ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದರು. ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಮುಂದೆ 2028ರ ವೇಳೆಗೆ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದಾರೆ. ಹೀಗಾಗಿ ಪ್ರಭಾವಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.

 

Recent Articles

spot_img

Related Stories

Share via
Copy link