
ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ದಾವಣಗೆರೆ ಜಿಲ್ಲಾ ಫೋಕ್ಸೋ ಕೋರ್ಟ್ಗೆ ಆಗಮಿಸಿ ಜಾಮೀನು ಪ್ರಕ್ರಿಯೆ ಮುಗಿಸಿದರು.
ನಂತರ ಮಾತನಾಡಿದ ಅವರು, “ಷರತ್ತುಬದ್ದ ಜಾಮೀನು ನೀಡಿರುವ ಪೋಕ್ಸೋ ನ್ಯಾಯಾಲಯವನ್ನು ಗೌರವಿಸುತ್ತೇವೆ. ಕಾನೂನನ್ನು ಪರಿಪಾಲಿಸುತ್ತೇವೆ. ಇದು ಸತ್ಯಕ್ಕೆ ಸಂದ ಜಯ. ಮಠದ ಭಕ್ತರು ಹಾಗೂ ವಕೀಲ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಕೀಲರಾದ ಎಸ್.ವಿ.ಪಾಟೀಲ್ ಅವರು ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದರು. ಅಖಂಡ ಇತಿಹಾಸ ನೋಡಿದಾಗ ಯಾರೆಲ್ಲ ಹೋರಾಟ ಮಾಡಿದ್ದಾರೆಯೋ ಅವರಿಗೆಲ್ಲ ನಿಂದನೆ, ಅಪವಾದಗಳು ಬರುವುದು ಸಹಜ. ಶಂಕರಾಚಾರ್ಯರಿAದ ಹಿಡಿದು ಇಲ್ಲಿಯತನಕ ಪ್ರತಿಯೊಬ್ಬರಿಗೂ ನೋವುಗಳನ್ನು, ಕಷ್ಟಗಳನ್ನು ಕೊಟ್ಟಿದ್ದಾರೆ” ಎಂದರು.
“ಸನ್ಯಾಸತ್ವ ಎಂಬುದು ಹೂವಿನ ಹಾಸಿಗೆ ಅಲ್ವೇ ಅಲ್ಲ. ಅಗ್ನಿಪಥ. ಕೊನೆಗೆ ಉಳಿಯುವುದು ಸತ್ಯ, ಧರ್ಮ, ನ್ಯಾಯ. ಅದನ್ನೇ ನಾವು ಪಾಲಿಸುತ್ತಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಇಷ್ಟು ಮಾತ್ರ ಹೇಳಲು ಇಚ್ಛೆಪಡುತ್ತೇನೆ. ಲಿಂಗೈಕ್ಯ ಮಹಾಂತ ಶಿವಚಾರ್ಯ ಸ್ವಾಮೀಜಿಗಳು ಡೈರಿಯಲ್ಲಿ ಬರೆದು ಹೋಗಿದ್ದಾರೆ. ಅದು ಎಲ್ಲಾ ಭಕ್ತರಿಗೆ ಗೊತ್ತಿದೆ. ನಾವು ಹರಿಹರದ ಸ್ವಾಮೀಜಿ ಎಂದು ಗೊತ್ತಾಗ್ತಾ ಇರಲಿಲ್ಲ. ಏಕೆಂದರೆ ಭಕ್ತರು ಮಠಕ್ಕೆ ಬರುತ್ತಿರಲಿಲ್ಲ. ಹರಿಹರ ಭಕ್ತರು ಮಠದ ಪರ ಗಟ್ಟಿಯಾಗಿ ನಿಂತಿದ್ದಾರೆ. ನಮ್ಮ ಗುರುಗಳಾದ ಯೋಗ ಭಾರತೀಯ ಸ್ವಾಮೀಜಿಯವರಿಂದ ಯೋಗ, ಧ್ಯಾನ ಕಲಿತಿದ್ದೇನೆ. ಅವರು ಬರೆದ ಸೈಲೆನ್ಸ್ ಎಂಬ ಪುಸ್ತಕ ಇದು. ಇದರಲ್ಲಿ ಶಬ್ದಗಳು ಹೇಳುವುದನ್ನು ಮೌನ ಉತ್ತರಿಸಲಿದೆ” ಎಂದು ಹೇಳಿದರು.
ಆಗಸ್ಟ್ 20ಕ್ಕೆ ಕೋರ್ಟ್ಗೆ ಮತ್ತೆ ಹಾಜರ್
ಸ್ವಾಮೀಜಿ ಪರ ವಕೀಲರಾದ ಎಸ್.ವಿ.ಪಾಟೀಲ್ ಅವರು ಮಾತನಾಡಿ, “ಸ್ವಾಮೀಜಿ ಅವರು ದಾವಣಗೆರೆಯ ವಿಶೇಷ ಫೋಕ್ಸೋ ನ್ಯಾಯಾಲಯಕ್ಕೆ ಭೇಟಿ ನೀಡಿದರು. ನ್ಯಾಯಾಲಯದ ಎಲ್ಲಾ ಕಾನೂನುಗಳನ್ನು ಪಾಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಇಂದು ಆಗಮಿಸಿ ಸದ್ಯ ಜಾಮೀನು ಅರ್ಜಿಗೆ ಅವರು ಸಹಿ ಮಾಡಿದ್ದಾರೆ. ಇಂದು ಅವರ ಜಮೀನಿನ ಎಲ್ಲಾ ರೀತಿಯ ಪ್ರಕ್ರಿಯೆಗಳು ಮುಗಿದಿವೆ. ಮುಂದಿನ ದಿನಾಂಕ ಆಗಸ್ಟ್ 20ಕ್ಕೆ ಸ್ವಾಮೀಜಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಇದಲ್ಲದೆ ಈ ಪ್ರಕರಣದ ಎರಡನೇ ಆರೋಪಿಗೆ ಕೂಡ ಸಮನ್ಸ್ ಕೊಡಲಾಗಿದೆ. ಅವರೂ ಕೂಡ ಹಾಜರ್ ಆಗಲಿದ್ದಾರೆ. ಒಂದು ಲಕ್ಷ ರೂಪಾಯಿ ಜಾಮೀನು, ಭದ್ರತೆಯ ಬಾಂಡ್ ಬರೆದು ಕೊಡಲಾಗಿದೆ. ಪ್ರತಿಬಾರಿ ನ್ಯಾಯಾಲಯಕ್ಕೆ ಹಾಜರ್ ಆಗಬೇಕು, ಸಾಕ್ಷಿಗಳಿಗೆ ತೊಂದರೆ ಕೊಡಕೂಡದು. ಈ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗಲು ಸಹಕರಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ” ಎಂದು ಅವರು ತಿಳಿಸಿದರು.








