
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಅಂತಿಮ ಹಂತಕ್ಕೆ ತಲುಪಿದೆ. ನವದೆಹಲಿಯಲ್ಲಿ ಜು.17 ಗುರುವಾರದಂದು ಇಡೀ ದಿನ ನಡೆದ ಮಹತ್ವದ ಸರಣಿ ಸಭೆಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದು, ಮುಂಬರುವ ಜಂಟಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆಯಾಗುವುದು ಅಧಿಕೃತಗೊಂಡಿದೆ. ಬರುವ ಆಗಸ್ಟ್ 6 ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಖಚಿತಪಡಿಸಿವೆ.
ಸಂಪುಟ ವಿಸ್ತರಣೆ ಸಂಬAಧ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಲು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರುಗಳು ದೆಹಲಿಗೆ ತೆರಳಿದ್ದರು. ಗುರುವಾರದಂದು ಇಡೀ ದಿನ ರಾಜ್ಯ ನಾಯಕರುಗಳು ಕಾಂಗ್ರೆಸ್ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಸಂಬAಧ ಚರ್ಚೆ ನಡೆಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಪುತ್ರನ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರ ನೇತೃತ್ವದಲ್ಲಿ ನಡೆದ ಸಭೆಯನ್ನು ಮೊಟಕುಗೊಳಿಸಲಾಗಿತ್ತು. ಖರ್ಗೆಯವರು ನಿನ್ನೆ ಬೆಂಗಳೂರಿಗೆ ವಾಪಸ್ಸಾದರು. ಆನಂತರ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪುತ್ರನ ಆರೋಗ್ಯ ಸುಧಾರಣೆ ನಂತರ ಖರ್ಗೆ ಅವರು ದೆಹಲಿಗೆ ಬಂದ ಬಳಿಕ ಅವಶ್ಯಬಿದ್ದರೆ ನಿಮ್ಮನ್ನು ಕರೆಯುತ್ತೇನೆ. ಆಗ ದೆಹಲಿಗೆ ಬನ್ನಿ ಎಂದು ರಾಹುಲ್‌ಗಾಂಧಿ ರಾಜ್ಯ ನಾಯಕರುಗಳಿಗೆ ಸೂಚನೆ ನೀಡಿದ್ದರು. ಇದಾದ ಬಳಿಕ ನಿನ್ನೆ ತಡ ರಾತ್ರಿ ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ರವರೊಂದಿಗೆ ರಾಹುಲ್‌ಗಾಂಧಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು.
ಈ ಮಾತುಕತೆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಡೆಯಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಪಟ್ಟಿಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಎಲ್ಲರ ಜತೆ ಚರ್ಚಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನೀಡಿರುವ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ತಮ್ಮದೇ ಆದ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಜತೆ ಒಂದು ಸುತ್ತಿನ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.
ಅಗತ್ಯಬಿದ್ದರೆ ಮಾತ್ರ ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದಿನ ವಾರ ಮತ್ತೆ ದೆಹಲಿಗೆ ಕರೆಯಬಹುದು. ಇಲ್ಲದಿದ್ದರೆ ಕಾಂಗ್ರೆಸ್ ಹೈಕಮಾಂಡೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮುಂದಿನ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಹುಲ್‌ಗಾಂಧಿ ರವರು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಲಿದ್ದಾರೆ. ಅಗತ್ಯಬಿದ್ದರೆ ಮಾತ್ರ ರಾಜ್ಯ ನಾಯಕರರನ್ನು ಕರೆದು ಚರ್ಚಿಸಲಿದ್ದಾರೆ.
ಬರುವ ಆಗಸ್ಟ್ 6 ರಿಂದ ವಿಧಾಮಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಪಕ್ಕಾ. ಖಾಲಿ ಇರುವ ಸಂಪುಟದಲ್ಲಿ 20 ಸ್ಥಾನಗಳಿಗೆ 40 ಕ್ಕೂ ಹೆಚ್ಚು ಶಾಸಕರು ಸಚಿವಕಾಂಕ್ಷಿಗಳಾಗಿದ್ದು, ಹೈಕಮಾಂಡ್ ಹಿರಿತನ, ಪ್ರಾದೇಶಿಕವಾರು, ಜಾತಿವಾರು ಎಲ್ಲವನ್ನು ನೋಡಿ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ದೆಹಲಿಗೆ ತೆರಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಾಸದ್ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಮತ್ತೆ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ ಎಂದು ಇವರುಗಳು ಹೇಳಿದ್ದು, ಹೈಕಮಾಂಡ್ ಸದ್ಯದಲ್ಲೇ ಎಲ್ಲವನ್ನು ನೋಡಿ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿ ಮಾಡಲಿದೆ.
ಬಾಕ್ಸ್
ಸಿದ್ದರಾಮಯ್ಯ ಉಪಹಾರ ಸಭೆ : ದೆಹಲಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಬೆಳಿಗ್ಗೆ ತಮ್ಮ ಆಪ್ತ ಶಾಸಕರ ಜತೆ ಉಪಹಾರ ಸಭೆ ನಡೆಸಿ ಲೋಕಾಭಿರಾಮವಾಗಿ ಮಾತನಾಡಿದರು.
ಗುರುವಾರದಂದು ಇಡೀ ದಿನ ಸರಣಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಿಗ್ಗೆಯೇ ಕರ್ನಾಟಕ ಭವದಲ್ಲಿ ತಮ್ಮ ಆಪ್ತ ಶಾಸಕರ ಜತೆ ಉಪಹಾರ ಸೇವಿಸಿ, ಸಂಪುಟ ವಿಸ್ತರಣೆ ಬಗ್ಗೆ, ವರಿಷ್ಠರ ಜತೆಗಿನ ಚರ್ಚೆ ಎಲ್ಲವನ್ನು ಆಪ್ತ ಶಾಸಕರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಹಾರ ಸಭೆಯಲ್ಲಿ ಶಾಸಕರುಗಳಾದ ಅಪ್ಪಾಜಿ ನಾಡಗೌಡ, ಬಿ.ಆರ್. ಪಾಟೀಲ್, ಯಶವಂತರಾಯ ನಾಡಗೌಡ, ಹಂಪನಗಡ ಬಾದರ್ಲಿ, ಅಶೋಕ್ ಪಟ್ಟಣ, ವಿಜಯಾನಂದ ಕಾಶಂಪ್ಪನವರು, ರಹೀಂ ಖಾನ್, ಸುಬ್ಬಾರೆಡ್ಡಿ, ಕೋನರೆಡ್ಡಿ, ಎಂ. ಆರ್. ಸೀತಾರಾಮ್, ಮಾನೆ, ಎ,ಎಸ್. ಪೊನ್ನಣ್ಣ, ಎಂ.ಸಿ. ಸುಧಾಕರ್, ಎಂ.ಸಿ., ರಿಜ್ವಾನ್ ಹರ್ಷದ್, ಟಿ.ಬಿ. ಜಯಚಂದ್ರ, ಆರ್.ಬಿ. ತಿಮ್ಮಾಪುರ, ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.
ಬಾಕ್ಸ್
ವರಿಷ್ಠರಿಂದ ಮಾರ್ಗದರ್ಶನ ¸ ಸಂಪುಟ ವಿಸ್ತರಣೆ : ಸಿಎಂ ಡಿ ಕೆ ಶಿವಕುಮಾರ್
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಹಳೇ ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಶನಿವಾರ ಭೇಟಿ ಮಾಡಲಾಗುವುದು. ವರಿಷ್ಠರಿಂದ ಮಾರ್ಗದರ್ಶನ ಪಡೆದು ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಲಾಗುವುದು. ಎಐಸಿಸಿ ಕಚೇರಿ ನಮಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ದೇವಾಲಯವಿದ್ದಂತೆ. ನಾವು ಅದರೊಂದಿಗೆ ಬೆಳೆದಿದ್ದೇವೆ. ನಮ್ಮ ಪಕ್ಷದ ಕಾರ್ಯದರ್ಶಿಯನ್ನು ದೇವಾಲಯದಲ್ಲಿಯೇ ಭೇಟಿಯಾಗುವುದು ನಮ್ಮ ಕರ್ತವ್ಯವಾಗಿದೆ ತಿಳಿಸಿದರು.
ಮಾರ್ಚ್ ಅಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಿಂದಾಗಿ ಜಿಬಿಎ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಡಿಸೆಂಬರ್ 31 ರವರೆಗೆ ಕಾಲಾವಕಾಶವನ್ನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಸುಪ್ರೀಂ ಕೋರ್ಟ್ ಕಾಲಾವಕಾಶವನ್ನು ವಿಸ್ತರಿಸಿದೆ. ಜಿಬಿಎ ಚುನಾವಣೆಯಲ್ಲದೇ ಮಾರ್ಚ್ ಅಂತ್ಯದೊಳಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಚುನಾವಣೆಗಳನ್ನು ನಡೆಸಲಾಗುವುದು? ಎಂದು ತಿಳಿಸಿದರು.
ಚುನಾವಣೆಯಲ್ಲಿ ಯುವಕರಿಗೆ ಅವಕಾಶ
ಗ್ರಾಮ ಪಂಚಾಯಿತಿಯಿAದ ಕಾರ್ಪೊರೇಷನ್ ವರೆಗೆ ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಅಧಿಕಾರ ವಿಕೇಂದ್ರೀಕರಣವನ್ನು ತರಲು ಸಂವಿಧಾನಕ್ಕೆ ಮಾಡಲಾದ 73 ನೇ ಮತ್ತು 74 ನೇ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.








