ಮಣ್ಣಿನ ಮಗನನ್ನು ತೊರೆದು ಸ್ವರ್ಗಸ್ಥರಾದ ಮಣ್ಣಿನ ಮಗಳು…!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

ಬೆoಗಳೂರು: ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ(85) ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮಣ್ಣಿನ ಮಗನನ್ನು ತೊರೆದ ಮಣ್ಣಿನ ಮಗಳ ನಿಧನ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜನತಾಪರಿವಾರದ ಲಕ್ಷಾಂತರ ಕಾರ್ಯಕರ್ತರಿಗೆ ಆಘಾತ ನೀಡಿದೆ.
ಮೃತರು ಪತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಪುತ್ರರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸೇರಿದಂತೆ ನಾಲ್ವರು ಗಂಡು, ಇಬ್ಬರು ಹೆಣ್ಣುಮಕ್ಕಳು, ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿ ಇಬ್ಬರು ಅಳಿಯಂದಿರು, ಮೊಮ್ಮಕ್ಕಳು, ಮುಮ್ಮೊಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಆಸ್ಪತ್ರೆಯಿಂದ ಶನಿವಾರ ಸಂಜೆ ಪದ್ಮನಾಭನಗರದ ಗೌಡರ ನಿವಾಸಕ್ಕೆ ಚನ್ನಮ್ಮರ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆ ಮಾತನಾಡಿದ ಪುತ್ರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಸ್ವಗ್ರಾಮ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಗೆ ತಾಯಿಯ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುವುದು. ಸೋಮವಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ದುಃಖಿತರಾದ ಗೌಡರ ಕುಟುಂಬಕ್ಕೆ ಗಣ್ಯಾತಿಗಣ್ಯರ ಸಂತಾಪ
93ರ ಇಳಿವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡು ದುಃಖಿತರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪುತ್ರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಇಡೀ ಗೌಡರ ಕುಟುಂಬಕ್ಕೆ ದೇಶದೆಲ್ಲೆಡೆಯಿಂದ ಸಂತಾಪಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರಮೋದಿ, ರಾಷ್ಟçಪತಿ ದ್ರೌಪದಿ ಮುರ್ಮು, ಉಪರಾಷ್ಟçಪತಿ ರಾಧಾಕೃಷ್ಣನ್, ವಿಪಕ್ಷ ನಾಯಕರಾದ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ರಾಜ್ಯಪಾಲ ಥಾವರ್‌ಚಂದ್‌ಗೆಹ್ಲೋಟ್, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ವೀರಪ್ಪಮೊಯ್ಲಿ, ಬಸವರಾಜಬೊಮ್ಮಾಯಿ, ಶೆಟ್ಟರ್, ಸದಾನಂದಗೌಡ, ಡಿಸಿಎಂ ಡಾ.ಜಿ.ಪರಮೇಶ್ವರ ಸೇರಿದಂತೆ ಕೇಂದ್ರ ಸಚಿವರುಗಳು, ರಾಜ್ಯದ ಹಾಲಿ- ಮಾಜಿ ಸಚಿವರು, ಶಾಸಕರು, ಸಂಸದರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ರಾಜಕೀಯ ಮುಖಂಡರು, ನೆರೆಯ ರಾಜ್ಯಗಳ ನೇತಾರರು, ಚುಂಚನಗಿರಿ, ಸುತ್ತೂರು, ಸಿದ್ಧಗಂಗೆ ,ಸಿರಿಗೆರೆ, ಕಾಗಿನೆಲೆ, ರಂಭಾಪುರಿ ಸೇರಿದಂತೆ ವಿವಿಧ ಮಠದ ಮಠಾಧೀಶರುಗಳು, ಸಾಹಿತಿ, ಕಲಾವಿದರು ಚೆನ್ನಮ್ಮ ಅವರ ಅಗಲಿಕೆಗೆ ಶ್ರದ್ಧಾಂಜಲಿ ಅರ್ಪಿಸಿ, ಗೌಡರು ಹಾಗೂ ಅವರ ಕುಟಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಕೃಷಿ-ರಾಜಕೀಯದ ದೊಡ್ಮನೆಯನ್ನು ಸಲುಹಿದ ಧೀಮಂತೆ ಚನ್ನಮ್ಮ
ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ರೈತಾಪಿ ದಂಪತಿಗಳಾದ ದೇವೇಗೌಡ-ಕಾಳಮ್ಮ ಅವರ ಮನೆಯ ಹಿರಿಯ ಮಗಳಾಗಿ ಜನಿಸಿದ ಚನ್ನಮ್ಮ ಅವರು 1954 ಮೇ 25ರಂದು ಹರದನಹಳ್ಳಿಯ ದೊಡ್ಡೇಗೌಡರ ಪುತ್ರ ಹೆಚ್.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಕೂಡು ಕುಟುಂಬದ ತವರು ಮನೆ ಹಾಗೂ ಗಂಡನ ಮನೆ ಎರಡನ್ನೂ ಸಮಾನವಾಗಿ ಸಲಹುವ ಮಹತ್ವದ ಜವಾಬ್ದಾರಿ ಚನ್ನಮ್ಮ ಅವರ ಹೆಗಲಿಗೇರಿತು. ಮನೆಯ ಹಿರಿಯ ಮಗಳಾಗಿ ನಾಲ್ವರು ತಮ್ಮಂದಿರು ಮತ್ತು ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು. ನ್ನಮ್ಮ ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬಿನಂತಿದ್ದು, ಸದಾ ಕಾಲ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸುವ ಮೂಲಕ ಗಟ್ಟಿಗಿತ್ತಿ ಎನಿಸಿಕೊಂಡಿದ್ದರು. ಆರು ಮಕ್ಕಳನ್ನ ಸಲಹಿದ್ದಲ್ಲದೆ, ಕುಟುಂಬದ ಒಕ್ಕಲುತನ, ಶಿಕ್ಷಣದ ಜವಾಬ್ದಾರಿ ಹೊತ್ತು ಆದರ್ಶ ಗೃಹಿಣಿಯಾಗಿದ್ದರು. ಮನೆಗೆ ಬರುತ್ತಿದ್ದ ಸಾರ್ವಜನಿಕರು, ರಾಜಕೀಯ ನೇತಾರರೆಲ್ಲರಿಗೂ ಮಾತೃ ವಾತ್ಯಲದಲ್ಲಿ ಆತಿಥ್ಯ ನೀಡುತ್ತಿದ್ದ ಚನ್ನಮ್ಮ ಅವರು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಪತ್ನಿ ಎಂದೂ ಎಲ್ಲಿಯೂ ಹಮ್ಮು-ಬಿಮ್ಮು ಪ್ರದರ್ಶಿಸಿದವರಲ್ಲ. ಪತ್ನಿ ಪ್ರಧಾನಿಯಾಗಿ ದೇಶದ ಪರಮಾಧಿಕಾರ ಮನೆಯಲ್ಲೆ ಇದ್ದ ಸಂದರ್ಭದಲ್ಲೂ ರಾಜಕೀಯ ಹಸ್ತಕ್ಷೇಪ ಮಾಡದೆ ರಾಜಕೀಯ ಸಮಾರಂಭಗಳಲ್ಲೂ ಕಾಣಿಸಿಕೊಳ್ಳದೆ ಮಾದರಿ ನಡೆ ಪ್ರದರ್ಶಿಸಿದ್ದರು.
2001ರಲ್ಲಿ ಆಸಿಡ್ ದಾಳಿಗೆ ತುತ್ತಾಗಿದ್ದರು:
2001ರಲ್ಲಿ ಗೌಡರ ಸಹೋದರನ ಪುತ್ರನಿಂದಲೇ ಆಸಿಡ್ ದಾಳಿಗೊಳಗಾಗಿದ್ದ ಚನ್ನಮ್ಮ ಅವರು ಆಸ್ಪತ್ರೆಯಲ್ಲಿ ಸುದೀರ್ಘಾವಧಿ ಚಿಕಿತ್ಸೆ ಪಡೆದು ಪುನರ್ಜನ್ಮ ಪಡೆದವರಂತೆ ಚೇತರಿಕೆ ಕಂಡಿದ್ದರು. ದೇವೇಗೌಡರ ಪ್ರತೀ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಚನ್ನಮ್ಮ ಅವರು ಧಾರ್ಮಿಕವಾಗಿ ಅತ್ಯಂತ ಶ್ರದ್ಧಾಳುವಾಗಿ ಸಂಸ್ಕಾರಯುತ ಜೀವನವನ್ನು ಮುನ್ನೆಡೆಸುತ್ತಿದ್ದರು. ಪತಿ, ಮಕ್ಕಳ ಯೋಗಕ್ಷೇಮ ವಿಚಾರದಲ್ಲಿ ಅತ್ಯಂತ ಕಾಳಜಿಯುಳ್ಳವರಾಗಿದ್ದರು. ಗೌಡರ ಎಲ್ಲಾ ಏಳು-ಬೀಳುಗಳಿಗೆ ಸಾಕ್ಷಿಪ್ರಜ್ಞೆಯಂತಿದ್ದರು.

ಪ್ರೀತಿಯ ಮಡದಿ ಚೇತರಿಸಿಕೊಳ್ಳುತ್ತಾರೆಂದಿದ್ದ ದೇವೇಗೌಡರು..!
ಬುಧವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಡಯಾಲಿಸಿಸ್ ನಡುವೆಯೂ ಪತ್ನಿಯ ಯೋಗಕ್ಷೇಮ ವಿಚಾರಿಸಲು ದಿನ ಆಸ್ಪತ್ರೆಗೆ ಧಾವಿಸಿ ಬರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಶುಕ್ರವಾರ ರಾತ್ರಿ ಪತ್ನಿ ಆರೋಗ್ಯ ಸ್ಥಿತಿ ಕಂಡು ಕಣ್ಣೀರುಹಾಕಿದ್ದರು. ದುಃಖವನ್ನು ತಡೆದುಕೊಂಡೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ಆಕೆಗೆ ಉಸಿರಾಟದ ಸಮಸ್ಯೆ ಬಿಟ್ಟರೆ ಬರ‍್ಯಾವುದೇ ತೊಂದರೆಯಿಲ್ಲ. ವೈದ್ಯರು ಅವರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. “she mಚಿಥಿ ಡಿeಛಿoveಡಿ” ಎಂದು ಪ್ರೀತಿಯ ಮಡದಿಯ ಚೇತರಿಕೆ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಶನಿವಾರ ಸಂಜೆ ಚೆನ್ನಮ್ಮ ಅವರು ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸುವುದರೊಂದಿಗೆ ದೇವೇಗೌಡರೊಂದಿಗಿನ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ.

ನಾಯಕರ ದಂಡು, ಭಾವುಕರಾದ ಎಚ್‌ಡಿಡಿ, ಎಚ್ಡಿಕೆ
ದೇವೇಗೌಡರ ಪತ್ನಿ ಚನ್ನಮ್ಮ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಿದ ವಿಷಯ ತಿಳಿದಂದಿನಿAದ ಪಕ್ಷಾತೀತವಾಗಿ ರಾಜಕೀಯ ನಾಯಕರು ಮಣಿಪಾಲ್ ಆಸ್ಪತ್ರೆಗೆ ಆಗಮಿಸಿ ಚನ್ನಮ್ಮ ಅವರ ಆರೋಗ್ಯ ಮಾಹಿತಿ ಪಡೆಯುತ್ತಿದ್ದರು.À ಬುಧವಾರ ಸಂಜೆ ಚನ್ನಮ್ಮ ಅಗಲಿಕೆ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಪತಿ ಎಚ್.ಡಿ.ದೇವೇಗೌಡರು ಕುಟುಂಬಸ್ಥರು ಕಣ್ಣೀರು ಹಾಕಿದರು. ಅವರ ಸರಳ ಜೀವನವನ್ನು ಸ್ಮರಿಸಿದರು. ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದರು.

ನಮ್ಮ ತಾಯಿ ಚೆನ್ನಮ್ಮ ಅವರದ್ದು ಸರಳ ಜೀವನವಾಗಿತ್ತು.ಅವರು ಅಪಾರರ ದೈವಭಕ್ತೆಯಾಗಿದ್ದರು. ಲಕ್ಷಾಂತರ ಕುಟುಂಬದ ಬದುಕಿಗೆ ದಾರಿದೀಪವಾಗಿದ್ದರು. ನಾವು ಅವರಿಂದ ಹಲವು ಒಳ್ಳೆ ಬುದ್ದಿ ಕಲಿತೆದ್ದೆವು. ಆಸಿಡ್ ದಾಳಿ ಬಳಿಕ ಅವರು ಬದುಕಿದ್ದೇ ಹೆಚ್ಚು. ನಾವು 2 ಬಾರಿ ಕೋವಿಡ್ ಬಂದಮೇಲೆ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ನಾವು ಎಲ್ಲೇ ಇದ್ದರೂ ಅವರ ಸ್ಮರಣೆಯಲ್ಲೇ ಇರುತ್ತಿದ್ದೆವು. ಇಂದು ಆ ದೇವರು ತಾಯಿಯನ್ನು ಕರೆದುಕೊಂಡಿದ್ದೇನೆ. ಆದರೆ ಅವರ ಆದರ್ಶದ ಬದುಕು, ಸರಳ ಜೀವನ ಸದಾ ನಮಗೆ ದಾರಿದೀಪವಾಗಿದೆ.
-ಎಚ್.ಡಿ.ಕುಮಾರಸ್ವಾಮಿ, ಪುತ್ರ ಹಾಗೂ ಕೇಂದ್ರಸಚಿವ.

Recent Articles

spot_img

Related Stories

Share via
Copy link