
ನವದೆಹಲಿ: ಕಳೆದೆಂಟು ದಿನಗಳಿಂದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗದ್ದಲಕ್ಕೆ ಸಾಕ್ಷಿಯಾಗಿದ್ದ ಸಂಸತ್ನ ಉಭಯ ಸದನಗಳಲ್ಲಿ ಗುರುವಾರ ರಾಮಮಂದಿರ ದೇಣಿಗೆ ಕಳ್ಳತನ ವಿಚಾರ ತೀವ್ರ ಕೋಲಾಹಲ ಸೃಷ್ಟಿಸಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡುವAತೆ ಮಾಡಿದ್ದರೆ, ಇತ್ತ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ-2026ರ ಚರ್ಚೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಠಿಚಾರ್ಜ್ ಹಾಗೂ ದೌರ್ಜನ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಗುಡುಗಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ನೂತನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ನಿನ್ನೆ ಅಂಗೀಕಾರ ದೊರೆತಿತ್ತು. ಆದರೆ, ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದAತೆಯೇ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸದಸ್ಯರು ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ವಿಚಾರವನ್ನು ಪ್ರಸ್ತಾಪಿಸಿ ತಕ್ಷಣವೇ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಉಭಯ ಸದನಗಳಲ್ಲೂ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ದೊಡ್ಡ ಮಟ್ಟದ ವಾಕ್ಸಮರ ನಡೆದು ಗದ್ದಲ ತಾರಕಕ್ಕೇರಿದ ಕಾರಣ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಕೇವಲ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವಾಲಯದ ಅನುಮೋದನೆ ಇಲ್ಲದೆ ದೆಹಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆಗಳು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮತ್ತು ಪೆಲೆಟ್ ಗನ್ ಬಳಸಲು ಸಾಧ್ಯವೇ ಇಲ್ಲ. ಇದಕ್ಕೆ ಕಾರಣರಾದ ಗೃಹ ಸಚಿವರು ಈಗ ಮುಚ್ಚಿದ ಬಾಗಿಲಿನ ಹಿಂದೆ ಅಡಗಿದ್ದಾರೆ, ಅವರನ್ನು ನಾವು ಒಂದು ದಿನ ಹೊರಗೆಳೆದು ತಂದೇ ತರುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸುವ ಬದಲು ಕೇವಲ ದೆಹಲಿಯ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ಹಾನಿ ನಿಯಂತ್ರಿಸುವ ಉದ್ದೇಶದಿಂದಲೇ ಸರ್ಕಾರ ಈ ಮಸೂದೆಯನ್ನು ತಂದಿದೆ. ಆಡಳಿತ ಪಕ್ಷವು ಕ್ಷುಲ್ಲಕ ರಾಜಕೀಯದಲ್ಲಿ ತೊಡಗದಿದ್ದರೆ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನೆಗಳು ಮತ್ತು ಪೊಲೀಸ್ ದೌರ್ಜನ್ಯವನ್ನು ಮೊದಲೇ ತಡೆಯಬಹುದಿತ್ತು. ಪ್ರತಿಭಟನಾಕಾರರ ಮೇಲಾದ ಪ್ರತಿಯೊಂದು ಗಾಯಕ್ಕೂ ಸರ್ಕಾರವೇ ಹೊಣೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.








