
ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹಾಗೂ ತೆರಿಗೆ ಕಡಿತಗೊಳಿಸಿ ಇಂಧನ ಬೆಲೆ ಇಳಿಸಿದರೆ, ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸರ್ಕಾರ ಸಿದ್ಧವಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ. ಸಾರಿಗೆ ಸಂಸ್ಥೆಗಳ ಉಳಿವು ಹಾಗೂ ಆರ್ಥಿಕ ಚೇತರಿಕೆ ದೃಷ್ಟಿಯಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಖರೀದಿಸಲೂ ಹಣಕಾಸಿನ ಮುಗ್ಗಟ್ಟು ಎದುರಾಗಿತ್ತು. ಹೀಗಾಗಿ ಹಂತ ಹಂತವಾಗಿ ಎರಡು ಮತ್ತು ಮೂರು ರೂಪಾಯಿಗಳಷ್ಟು ಪ್ರಯಾಣ ದರ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹಾಗೂ ತೆರಿಗೆ ಕಡಿತಗೊಳಿಸಿ ಇಂಧನ ಬೆಲೆ ಇಳಿಸಿದರೆ, ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಕೀಟನಾಶಕ, ಕಬ್ಬಿಣ, ಸಿಮೆಂಟ್ ಹಾಗೂ ಔಷಧಗಳ ಬೆಲೆ ಏರಿಕೆಯಾದಾಗ ಪ್ರತಿಪಕ್ಷಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ ಅವರು, ರೈತರು ಬಳಸುವ ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ವಿಪಕ್ಷಗಳಿಗೆ ಕಾಳಜಿ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬರಗಾಲದ ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟದ ಅರಿವು ಸರ್ಕಾರಕ್ಕಿದೆ. ರೈತರ ಬದುಕಿನ ಕಷ್ಟಗಳನ್ನು ಅರ್ಥಮಾಡಿಕೊಂಡಿರುವAತೆಯೇ ಸಾರಿಗೆ ಸಂಸ್ಥೆಗಳೂ ಉಳಿಯಬೇಕು. ಅವು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹಾಗೂ ಸೆಸ್ ಕಡಿಮೆ ಮಾಡುವಂತೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಿ. ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯ ಸರ್ಕಾರವೂ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸವಾಲು ಹಾಕಿದರು.
ಇನ್ನು ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಾಲಿನ ಗುಣಮಟ್ಟ ಮತ್ತು ಕೊಬ್ಬಿನ ಅಂಶಕ್ಕೆ ಅನುಗುಣವಾಗಿ ದರ ನಿಗದಿಯಾಗುತ್ತದೆ. ಸಾಮಾನ್ಯ ಹಾಲು, ನಾಟಿ ಹಸುವಿನ ಹಾಲು ಹಾಗೂ ಎಮ್ಮೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ವಿಭಿನ್ನವಾಗಿರುವುದರಿಂದ ದರದಲ್ಲೂ ವ್ಯತ್ಯಾಸವಿರುತ್ತದೆ ಎಂದು ಸ್ಪಷ್ಟಪಡಿಸಿದರು.








