ಮಧುಗಿರಿ
ಏಕಶಿಲಾ ಬೆಟ್ಟವನ್ನೇರಿದ ಯುವಕನೊಬ್ಬ ಕಾಲು ಜಾರಿ ದುರ್ಗಮ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಶವ ಹೊರ ತೆಗೆಯಲು ಚಿತ್ರದುರ್ಗದ ಜ್ಯೋತಿ ರಾಜ್ ರವರನ್ನು ಕರೆಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಸ್ವ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುಮಾರು ಸಾವಿರಾರು ಯುವಕರು ಹಾಗೂ ಯುವತಿಯರ ಗುಂಪುಗಳನ್ನಾಗಿ ಮಾಡಿಕೊಂಡು ಬುಧವಾರ ಬೆಳಗ್ಗೆಯಿಂದಲೆ ಬೆಟ್ಟ ಹತ್ತಲು ಪ್ರಾರಂಭಿಸಿದ್ದರು.
ಕಳೆದ ಮೂರು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಆ ಮಳೆಯಲ್ಲಿಯೇ ಜನರು ಬೆಟ್ಟ ಹತ್ತಿದ್ದರು. ಸುಮಾರು 10 ಗಂಟೆ ಸಮಯದಲ್ಲಿ ಬೆಟ್ಟದಲ್ಲಿನ ಎರಡು ಕಂಬಕ್ಕೆ ಹೊಂದಿಕೊಂಡಿರುವ ಕೋಟೆಯ ಸಮೀಪ ಯಾರೊ ಯುವಕನೊಬ್ಬ ಕೆಳಕ್ಕೆ ಕಾಲು ಜಾರಿ ಚಂದ್ರ ದೊಣೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆಂಬ ಮಾಹಿತಿ ಮಧ್ಯಾಹ್ನದ ಹೊತ್ತಿಗೆ ಜನರ ಬಾಯಲ್ಲಿ ಹರಿದಾಡಿತು. ಜತೆಗೆ ಸಾಮಾಜಿಕ ಜಾಲ ತಾಣದಲ್ಲಿ ಫೋಟೋಗಳು ಹರಿದಾಡಿ, ಯುವಕ ಮೃತಪಟ್ಟಿರುವುದು ಖಚಿತವಾಗಿದೆ. ಆದರೆ ಮೃತಪಟ್ಟ ಯುವಕ ಯಾರೆಂದು ರಾತ್ರಿಯಾದರೂ ತಿಳಿದು ಬಂದಿರಲಿಲ್ಲ.
ಕಾರ್ಯಾಚರಣೆಗೆ ತೊಡಗಿಸಿಕೊಂಡ ಪೊಲೀಸರು ಬೆಟ್ಟ ಹತ್ತಿದರೂ ಸಹ ಯಾವುದೇ ಪ್ರಯೋಜನ ಕಂಡಿಲ್ಲ. ನಂತರ ಆಗ್ನಿಶಾಮಕ ದಳವರು ಬೆಟ್ಟದ ಕೆಳಭಾಗದಿಂದ ಬೆಟ್ಟ ಹತ್ತಲು ಪ್ರಯತ್ನ ಪಟ್ಟರೂ ತುಂತುರು ಮಳೆ ಆಡ್ಡಿಯಾಗುತ್ತಿತ್ತು. ಆದ್ದರಿಂದ ಚಿತ್ರದುರ್ಗದ ಕೋತಿರಾಮ ಅಲಿಯಾಸ್ ಜ್ಯೋತಿರಾಜ್ ರವರನ್ನು ಪಟ್ಟಣಕ್ಕೆ ಈಗಾಗಲೇ ಕರೆಸಲಾಗಿದ್ದು, ಗುರುವಾರ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.








