ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಭಾನುವಾರ ಸಂಜೆ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು ಬಿರುಗಾಳಿಗೆ ಹೋಬಳಿಯ ಕುರಿಹಟ್ಟಿ ಗ್ರಾಮ ತತ್ತರಿಸಿ ಹೋಗಿದೆ.
ಬಿರುಗಾಳಿಗೆ ಗ್ರಾಮದ ಬಹುತೇಕ ಮನೆಗಳ ಹೆಂಚುಗಳು, ಮೇಲ್ಚಾವಣಿ ಶೀಟ್‍ಗಳು ಹಾರಿ ಹೋಗಿ ಮನೆಯಲ್ಲೆಲ್ಲಾ ನೀರು ನಿಂತು ಗ್ರಾಮದ ಜನ ಇಡೀ ರಾತ್ರಿ ಜಾಗರಣೆ ಮಾಡುವಂತೆ ಮಾಡಿದೆ.ಅಲ್ಲದೆ ನುರಾರು ವರ್ಷ ಹಳೆಯದಾದ ಅರಳಿ ಮರ ಧರೆಗುರುಳಿದ್ದು ಮರದ ಬಳಿ ಕಟ್ಟಿದ್ದ ಎಮ್ಮೆಯೊಂದು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಜೊತೆಗೆ ಇಲ್ಲನ ಸರ್ಕಾರಿ ಶಾಲೆಯ ಬಳಿಯಿದ್ದ ಎರಡು ಮರಗಳು, ಹಾಲಿನಡೇರಿ ಮುಂಭಾಗದಲ್ಲಿದ್ದ ಬೇವಿನ ಮರಗಳು ಮುರಿದು ಬಿದ್ದಿವೆ.
ಕುರಿಹಟ್ಟಿ ಸುತ್ತಮುತ್ತ ತೆಂಗಿನ ಮರಗಳು ಧರೆಗುರುಳಿದ್ದು ಡಾ,ರಾಜಶೇಖರ್ ಅವರ 18, ಕೆಂಕೆರೆ ನವೀನ್ ಅವರ 7, ಚನ್ನಬಸಣ್ಣ ಅವರ 3, ಗಂಗಣ್ಣರ ಮೂರ್ತಪ್ಪ ಅವರ 5, ಬಸವರಾಜಪ್ಪ ಅವರ 1 ತೆಂಗಿನ ಮರಗಳು ಧರೆಗುರುಳಿವೆ. ಲಿಂಗರಾಜು ಅವರ ಫಲಭರಿತ ಮಾನಿನ ಮರ ಬಿದ್ದು ಸಾವಿರಾರು ರೂ. ನಷ್ಟವಾಗಿದೆ.
ಮಳೆಗಾಳಿಗೆ ಕುರಿಹಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 5 ಕಂಬಗಳು ಗೌಡಗೆರೆ ಬಳಿ ಧರೆಗುರುಳಿತ್ತು. ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ಮಳೆ ಬಂದ ರಾತ್ರಿ ಸೇರಿದಂತೆ ಮರುದಿನವೂ ಸಹ ಕರೆಂಟ್ ಇಲ್ಲದೆ ನಿವಾಸಿಗಳು ಪರದಾಡಿದ್ದಾರೆ. ಅಲ್ಲದೆ ಮಂಗಳವಾರ ಬೆಳಿಗ್ಗೆ ಬಿದ್ದಿದ್ದ ಹೆಂಚು, ಶೀಟ್‍ಗಳನ್ನು ಹುಡುಕಿ ಪುನಃ ಜೋಡಿಸುವ ಕಾರ್ಯದಲ್ಲಿ ಜನ ನಿರತರಾಗಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.