ಬಳ್ಳಾರಿ:
ಹಂಪಿ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ನವೆಂಬರ್ 3ರಿಂದ 5ರವರೆಗೆ ಕಡ್ಡಾಯವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಬಾರಿ 5 ವೇದಿಕೆಗಳು ಇರಲಿವೆ ಎಂದು ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವ-2018ಕ್ಕೆ ಸಂಬಂಧಿಸಿದಂತೆ ಗುರುವಾರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಉತ್ಸವದಲ್ಲಿ ಕಲಾಪ್ರದರ್ಶನ ನೀಡುವ ಕಲಾವಿದರ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಸಮಿತಿಗಳನ್ನು ರಚಿಸಿ ಒಂದೂವರೆ ತಿಂಗಳ ಮುಂಚೆಯೇ ಆಯ್ಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನವೆಂಬರ್ 3ರಂದು ಸಂಜೆ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಹಂಪಿ ಉತ್ಸವದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಹಾಗೂ ಯಾವ್ಯಾವ ಸ್ಥಳದಲ್ಲಿ ಏನೆಲ್ಲಾ ಸಿದ್ಧತಾಕ್ರಮಗಳನ್ನು ಕೈಗೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸ್ಥಳಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ಕಲೆ ಎಂಬುದು ಯಾರ ಸ್ವತ್ತು ಅಲ್ಲ. ಕಲಾವಿದರಿಗೆ ಪ್ರತಿಭೆ ಎನ್ನುವುದಿದ್ದರೇ ತನ್ನಿಂದ ತಾನೇ ವೇದಿಕೆ ಸಿಗುತ್ತದೆ ಮತ್ತು ಅವರನ್ನು ಹುಡುಕಿಕೊಂಡು ಅವಕಾಶಗಳು ಬರುತ್ತವೆ ಈ ಸಂದರ್ಭದಲ್ಲಿ ಎಂದು ಹೇಳಿದ ಸಚಿವರು, ಕೃಷ್ಣದೇವರಾಯ ಆಡಳಿತ ನಡೆಸಿದ ಸ್ಥಳದಲ್ಲಿ ಕಲಾಪ್ರದರ್ಶನ ನೀಡಲು ತಮ್ಮ ಮನ ತುಡಿಯಬೇಕು; ಹಣಕ್ಕಾಗಿ ಅಲ್ಲ ಎಂದು ಕಲಾವಿದರಿಗೆ ಸಚಿವರು ಹೇಳಿದರು.
ಉತ್ಸವಗಳನ್ನು ಮಾಡುವುದು ರಾಜ್ಯ ಮತ್ತು ರಾಷ್ಟ್ರ ಆಕರ್ಷಣೆ ಮಾಡುವುದಕ್ಕಾಗಿ; ಆ ನಿಟ್ಟಿನಲ್ಲಿ ಪ್ರಯತ್ನಿಸೋಣ ಮತ್ತು ಈ ವಿಷಯದಲ್ಲಿ ಯಾವುದೇ ಕಾರಣ ವಿಫಲರಾಗುವುದು ಬೇಡ ಎಂದು ಅವರು ಹೇಳಿದರು.
ಕಳೆದ ಹಂಪಿ ಉತ್ಸವದಲ್ಲಿ ಏನೆಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತೋ ಮತ್ತು ಕಾರ್ಯಕ್ರಮಗಳನ್ನು ಮಾಡಲಾಗಿತ್ತೋ ಅದೇ ರೀತಿ ಈ ಬಾರಿಯೂ ಮಾಡಲಾಗುವುದು ಹಾಗೂ ಇನ್ನಷ್ಟು ವಿಭಿನ್ನವಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕಳೆದ ಬಾರಿ ಹಂಪಿ ಉತ್ಸವಕ್ಕೆ ಬಿಡುಗಡೆ ಮಾಡಲಾದ ಹಣ ಮತ್ತು ಕೈಗೊಳ್ಳಲಾದ ಕ್ರಮಗಳು, ನೀಡಲಾದ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಕಲಾವಿದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಸೈಯದ್ ನಾಸೀರ್ ಹುಸೇನ್, ಶಾಸಕರಾದ ಆನಂದಸಿಂಗ್,ಸೋಮಲಿಂಗಪ್ಪ,ಅಲ್ಲಂ ವೀರಭದ್ರಪ್ಪ, ಪಿ.ಟಿ.ಪರಮೇಶ್ವರ ನಾಯಕ್, ಗಣೇಶ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಅರುಣ ರಂಗರಾಜನ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ