ಗುಟ್ಕಾ-ಮದ್ಯ ಬೇಡವೇಬೇಡ, ಉದ್ಯೋಗ-ಅನ್ನ ಬೇಕು

ದಾವಣಗೆರೆ:

ಡ್ರಿಂಕ್ಸ್, ಡ್ರಗ್ಸ್ ಹಾಗೂ ಟೊಬ್ಯಾಕೊ (ಡಿಡಿಟಿ) ದುವ್ರ್ಯಸನ ಮುಕ್ತ ಜಿಲ್ಲೆಯನ್ನಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಸಾಂಕೃತಿಕ ಜಾಥಾ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಜಮಾಯಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಡಿಡಿಟಿ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದರ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿ, “ಗುಟ್ಕಾ-ಮದ್ಯ ಬೇಡವೇ ಬೇಡ”, “ಉದ್ಯೋಗ-ಅನ್ನ-ನೀರು ಬೇಕೇ ಬೇಕು”, “ಗುಟ್ಕಾ ತಿಂದವ ಗೊಟಕ್”, “ಗುಟ್ಕಾ-ಮದ್ಯ ಸಹವಾಸ ಹೆಂಡ್ತಿ ಮಕ್ಕಳು ಉಪವಾಸ” ಎಂಬ ಘೋಷಣೆಗಳನ್ನು ಕೂಗುತ್ತಾ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಡ್ರಿಂಕ್ಸ್, ಡ್ರಗ್ಸ್ ಹಾಗೂ ಟೊಬ್ಯಾಕೊ ಸಮಾಜದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದ್ದು, ಇವುಗಳ ಸೇವನೆಯಿಂದ ರಸ್ತೆ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಅಪಾರ ಪ್ರಮಾಣದಲ್ಲಿ ಯುವಕರು ಸಾವನಪ್ಪುತ್ತಿದ್ದಾರೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎಂಬ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಡಿಡಿಟಿ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ನಮ್ಮ ಟ್ರಸ್ಟ್ ನಾಲ್ಕು ಹಂತಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಅಕ್ಟೋಬರ್ 2ರ ವರೆಗೆ ಜಿಲ್ಲೆಯ 2500 ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಮಕ್ಕಳ ಮೂಲಕ ಪೋಷಕರು ದುಶ್ಚಟಗಳಿಗೆ ದಾಸರಾಗದಂತೆ ಅರಿವು ಮೂಡಿಸುವುದು ನಂತರ ಮಹಿಳೆಯರು, ಮಠಾಧೀಶರು ಹಾಗೂ ಮಾಧ್ಯಮಗಳ ಮೂಲಕ ದುವ್ರ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.

ಯರಗುಂಟೆಯ ಶ್ರೀಪರಮೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿರುವ ಪ್ರತಿಯೊಬ್ಬರು ಮೊದಲು ಮನೆಯನ್ನು ಶುದ್ಧಗೊಳಿಸಿ ನಂತರ ಓಣಿ, ಗ್ರಾಮಗಳನ್ನು ಶುದ್ಧಗೊಳಿಸುವ ಕೆಲಸ ಆರಂಭಿಸಿದರೆ, ದುವ್ರ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಯುವ ಪೀಳಿಗೆಯ ಸಹಕಾರ ಅತ್ಯವಶ್ಯವಾಗಿದೆ. ಮದ್ಯ, ಗುಟ್ಕಾ ಸೇವನೆಯಿಂದ ವಯಸ್ಸು, ಆಯಸ್ಸು ಎರಡೂ ಹದಗೆಡುತ್ತದೆ ಎಂಬುದರ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಹೇಳುವ ಮೂಲಕ ಪೋಷಕರನ್ನು ದುಶ್ಚಟಗಳಿಂದ ದೂರ ಉಳಿಸುವ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಈ ಕೆಟ್ಟ ವ್ಯವಸ್ಥೆಯನ್ನು ತಡೆಯಬೇಕಾದರೆ, ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಟ್ಟದಿಂದಲೇ ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಪಠ್ಯವನ್ನು ಅಳವಡಿಸಬೇಕು. ಆಗ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ತಯಾರು ತಯಾರು ಮಾಡಲು ಸಾಧ್ಯವಾಗಲಿದೆ. ಆದ್ದರಿಂದ ಸರ್ಕಾರ ಮದ್ಯ, ಗುಟ್ಕಾ, ಸಿಗರೇಟು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಪಾಠಗಳನ್ನು ಸೇರಿಸಬೇಕೆಂದು ಆಗ್ರಹಿಸಿದರು.

ಸರ್ಕಾರದ ಖಜಾನೆ ತುಂಬಿಸಿಕೊಳ್ಳುವ ದುರುದ್ದೇಶದಿಂದ ನಮ್ಮ ಮಂತ್ರಿ ಮಹೋದಯರು ಅಮಾಯಕ ಪ್ರಜೆಗಳಿಗೆ ಸರಾಯಿಯಂಥಹ ವಿಷ ಕುಡಿಸುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊಗಳ ದಾಸರಾಗಿ ಸಾಕಷ್ಟು ಜನ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೆ, ಹಲವರು ಸಾವು ಸಹ ಕಂಡಿದ್ದಾರೆ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರ ಡ್ರಿಂಕ್ಸ್, ಡ್ರಗ್ಸ್ ಹಾಗೂ ಟೊಬ್ಯಾಕೊ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ಜಾಥಾದಲ್ಲಿ ಶಿರಮಗೊಂಡನಹಳ್ಳಿಯ ಶಿವಾನಂದ ಗುರೂಜಿ, ಆವರಗೆರೆ ಚಂದ್ರು, ಹೆಚ್.ಬಿ.ವಾಮದೇವಪ್ಪ, ಪ್ರೀತಿ ರವಿಕುಮಾರ್, ವೀಣಾ, ಆರ್.ಬಿ.ಪಾಟೀಲ್ ಸೇರಿದಂತೆ ಸರ್ಕಾರಿ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap