ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತರುವಂತೆ ಆಗ್ರಹ

ಬ್ಯಾಡಗಿ:

  ಕೇಂದ್ರ ಸರ್ಕಾರ ಕ್ರೀಡಾ ವಸತಿನಿಲಯಗಳಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳ ಗರಿಷ್ಟ ವಯೋಮಾನವನ್ನು 25 ರವರೆಗೆ ಹೆಚ್ಚಿಸಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಕ್ರೀಡೆಯಲ್ಲಿ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯ, ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು ಕೂಡಲೇ ಮಾನ್ಯ ಸಂಸದರು, ಕೇಂದ್ರದ ಕ್ರೀಡಾ ಸಚಿವರು ಈ ಕುರಿತು ಗಂಭೀರ ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಸಂಯೋಜಕ ಬಿಎಚ್‍ಎನ್ ರಾವಳ ಅಭಿಪ್ರಾಯ ವ್ಯಕ್ತಪಡಿಸಿದರು.

 

  ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ ಬ್ಯಾಡಗಿ ಹಾಗೂ ತೀರ್ಪುಗಾರರ ಮಂಡಳಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜ್ಯೂನಿಯರ್ ಬಾಲಕ-ಬಾಲಕಿಯರ ಆಯ್ಕೆ ಟ್ರಯಲ್ಸ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಿನ ನಿಯಮದಂತೆ 15 ರಿಂದ 19 ವಯೋಮಾನದ ಕ್ರೀಡಾಟುಗಳಿಗೆ ಮಾತ್ರ ಸ್ಪೋಟ್ರ್ಸ ಹಾಸ್ಟೆಲ್‍ಗಳಲ್ಲಿ ತರಬೇತಿ ಪಡೆಯಲು ಅವಕಾಶವಿದೆ, 15 ನೇ ವಯಸ್ಸಿಗೆ ಕ್ರೀಡಾಪಟು ಇನ್ನೂ ಪ್ರವರ್ಧಮಾನಕ್ಕೆ ಬಂದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಆತನ ಶಿಕ್ಷಣ ಎಲ್ಲಿ ಅತಂತ್ರವಾಗುವುದೋ ಎಂಬ ಭಯದಲ್ಲಿ ಬಹುತೇಕ ಪಾಲಕರು ಸ್ಪೋಟ್ರ್ಸ ಹಾಸ್ಟೆಲ್ ಸೇರಿಸಲು ಹಿಂಜರಿಯುತ್ತಾರೆ ಹೀಗಾಗಿ ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು ಯಾವುದೇ ಕಾರಣಕ್ಕೂ ವಯಸ್ಸನ್ನು ಕನಿಷ್ಟ 16 ರಿಂದ ಗರಿಷ್ಟ 25 ಕ್ಕೆ ಹೆಚ್ಚಿಸುವುದು ಸೂಕ್ತ ಎಂದರು.
ಎಸ್‍ಎಸ್‍ಎಲ್‍ಸಿ ಫಲಿತಾಂಶದ ಮೇಲೆ ದುಷ್ಪರಿಣಾಮ: ಅಧ್ಯಕ್ಷತೆ ವಹಿಸಿ ಮಾತನಾಡಿದ ಕಬಡ್ಡಿ ಸಂಸ್ಥೆಯ ಖಜಾಂಚಿ ಗಂಗಣ್ಣ ಎಲಿ ಮಾತನಾಡಿ, 15 ವಯಸ್ಸಿಗೆ ಕ್ರೀಡಾಪಟುವು ಇನ್ನೂ 9ನೇ ತರಗತಿ ಅಭ್ಯಾಸದಲ್ಲಿ ತೊಡಗಿದ್ದು ಆತನಿಂದ ಬಾಲ್ಯಾವಸ್ಥೆ ಇನ್ನೂ ಕಳಚಿಕೊಂಡಿರುವುದಿಲ್ಲ, ಇಂತಹ ಸಂದರ್ಭದಲ್ಲಿ ಸ್ಪೋಟ್ರ್ಸ ಹಾಸ್ಟೆಲ್‍ಗೆ ಆಯ್ಕೆಯಾದ ಕ್ರೀಡಾಪಟುವಿನ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ 10ನೇ ತರಗತಿ (ಎಸ್‍ಎಸ್‍ಎಲ್‍ಸಿ) ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ ಎಂದರು.

  ಸರ್ಕಾರ ಮತ್ತು ಪಾಲಕರ ಉದ್ದೇಶ ಸಫಲತೆ ಈಡೇರುವುದಿಲ್ಲ:ಎಲ್.ಎಸ್.ಹರಳಹಳ್ಳಿ ಮಾತನಾಡಿ, ಕ್ರೀಡಾಪಟುವಿನ ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ನಿಗದಿಪಡಿಸಿದಲ್ಲಿ 16 ನೇ ವಯಸ್ಸಿನ ಬಳಿಕ ವಿದ್ಯಾರ್ಥಿ ಸ್ಪೋಟ್ರ್ಸ ಹಾಸ್ಟೆಲ್ ಸೇರಿಕೊಳ್ಳಲಿದ್ದಾನೆ, ಈ ವಯಸ್ಸಿನಲ್ಲಿ ಕ್ರೀಡಾಪಟು ತನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯ, ಅಲ್ಲದೇ ಕನಿಷ್ಟ 10 ವರ್ಷಗಳ ಕಾಲ ಆತ ಸ್ಪೋಟ್ರ್ಸ ಹಾಸ್ಟೆಲ್‍ನಲ್ಲಿ ತರಬೇತಿ ಪಡೆದುಕೊಂಡಲ್ಲಿ ಒಬ್ಬ ಪರಿಪೂರ್ಣ ಕ್ರೀಡಾಪಟುವಾಗಿ ಕ್ರೀಡೆಯಿಂದಲೇ ಬದುಕು ಕಟ್ಟಕೊಳ್ಳಲು ಸಾಧ್ಯವಾಗುತ್ತದೆ, ಅಲ್ಲದೇ ಕೇಂದ್ರ ಸರ್ಕಾರ ಮತ್ತು ಪಾಲಕರ ಉದ್ದೇಶವೂ ಕೂಡ ಸಫಲತೆ ಕಾಣಲಿದೆ, ಎಲ್ಲ ಕಾರಣಗಳಿಂದ ಗರಿಷ್ಟ ವಯೋಮಾನವನ್ನು 25 ಕ್ಕೆ ಹೆಚ್ಚಿಸುವುದು ಬಹಳಷ್ಟು ಅವಶ್ಯವಿದೆ ಎಂದರು.

  ಕ್ರೀಡಾನೀತಿ ಜಾರಿಯಾಗಲಿ: ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತರುವ ಉದ್ದೇಶದಿಂದ ಸಮರ್ಪಕ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ, ಆದರೆ ರಾಷ್ಟ್ರೀಯ ಕ್ರೀಡಾಪಟುಗಳು ತರಬೇತುದಾರರು, ನಿರ್ಣಾಯಕರು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆಗಳನ್ನು ನಡೆಸುವುದರಲ್ಲಿಯೇ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ ಎಲ್ಲದರಲ್ಲಿಯೂ ಲೋಪ ದೋಷಗಳಿರುವುದು ಸಹಜ ನಂತರ ಬದಲಾವಣೆ ಮಾಡಿಕೊಳ್ಳಲು ಸಾಧ್ಯತೆ ಇದ್ದು ಮೊದಲು ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತರುವಂತೆ ಆಗ್ರಹಿಸಿದ ಅವರು, ರಾಷ್ಟ್ರೀಯ ಕ್ರೀಡಾ ನೀತಿ ಜಾರಿಯಾಗದೇ ಉದಯೋನ್ಮುಖ ಕ್ರೀಡಾಪಟುಗಳ ಭವಿಷ್ಯ ಕತ್ತಲೆಯಂತಾಗಲಿದೆ ಎಂದರು.

  ಆಯ್ಕೆ ಪ್ರಕ್ರಿಯೆಲ್ಲಿ 204 ಬಾಲಕರು: ಆಯ್ಕೆ ಪ್ರಕ್ರಿಯೆಯಲ್ಲಿ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 204 ಬಾಲಕರು ಹಾಗೂ 42 ಬಾಲಕಿಯರು ಪಾಲ್ಗೊಂಡಿದ್ದು ಅದರಲ್ಲಿ ಅತ್ಯುತ್ತಮವಾದ ತಲಾ 6 ಬಾಲಕ ಬಾಲಕಿಯರನ್ನು ಆಯ್ಕೆ ಮಾಡುವ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ತೀರ್ಪುಗಾರರಾದ ಎಂ.ಆರ್.ಕೋಡಿಹಳ್ಳಿ, ಮಹ್ಮದಲಿ ಜಿನ್ನಾ ಹಲಗೇರಿ, ಎಚ್.ಬಿ.ದಾಸರ, ಎ.ಎಸ್.ಅಕ್ಕೂರ, ಬಸವರಾಜಪ್ಪ, ಮಂಜುಳ ಭಜಂತ್ರಿ, ರಾಜೇಶ ಮಾಳಗಿ, ಮಾರುತಿ ಜನ್ನು, ನಿಂಗಪ್ಪ ಯಲಿಮಣ್ಣನವರ, ಜಮೀರ ರಿತ್ತಿ, ಹಿರಿಯ ಕ್ರೀಡಾಪಟುಗಳಾದ ಸುಭಾಸ್ ಮಾಳಗಿ, ಜುಲ್ಪೀಕರ್ ಮೆಡ್ಲೇರಿ, ಸುಭಾಸ್ ಗಂಗಮ್ಮನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ರಾಷ್ಟ್ರಮಟ್ಟದ ತೀರ್ಪುಗಾರ ಎ.ಟಿ.ಪೀಠದ ಕಾರ್ಯಕ್ರಮ ನಿರ್ವಹಿಸಿದರು..

Recent Articles

spot_img

Related Stories

Share via
Copy link