ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾದ ಹಲವು ಗ್ರಾಮಗಳಲ್ಲಿ ಸೇನೆ, ನೌಕಪಡೆ ಸೇರಿದಂತೆ ವಿವಿಧ ತಂಡಗಳು ನಡೆಸಿದ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ. ಭಾಸ್ಕರರಾವ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ದಿನಗಳಿಂದ ಕೊಡಗಿನಲ್ಲಿ ಗ್ರಾಮಸ್ಥರ ರಕ್ಷಣೆಗೆ ಕೈಗೊಂಡಿದ್ದ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಸುಮಾರು ಐದೂವರೆ ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಗ್ರಾಮಗಳಲ್ಲಿ ಅಪಾಯಕ್ಕೆ ಒಳಗಾಗಿರುವ ಜನರ ಹುಡುಕಾಟಕ್ಕೆ ಇಂದಿನಿಂದ 8 ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರಕೃತಿ ವಿಕೋಪ ಪ್ರಕರಣಗಳಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಜಾನುವಾರುಗಳ ರಕ್ಷಣೆಗೆ ಕೂಡಾ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ಹೇಳಿದ ಭಾಸ್ಕರರಾವ್, ಕೊಡಗಿನ ಸಂತ್ರಸ್ಥರಿಗೆ ನೀಡುವ ಹಣವನ್ನು ಅಧಿಕೃತವಾದ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡುವಂತೆ ವಿನಂತಿಸಿದರು.
ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಶರತ್ಚ್ ಚಂದ್ರ ಮಾತನಾಡಿ, ರಕ್ಷಣಾ ಕಾರ್ಯಾಚರಣೆ ತೃಪ್ತಿಕರವಾಗಿ ಮುಕ್ತಾಯಗೊಂಡಿದೆ ಎಂದು ಹೇಳಿದರು.