ಬೆಂಗಳೂರು
ಚಿಲ್ಲರೆ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧಿಸಿ, ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 8 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಹೊಸೂರಿನ ಸೋಡಾಪುರಂನ ಶ್ರೀನಿವಾಸ್ ಅಲಿಯಾಸ್ ಸೀನಪ್ಪ (42) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 8 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಯು ಪರಪ್ಪನ ಅಗ್ರಹಾರದ ಗೋವಿಂದಚೆಟ್ಟಿ ಪಾಳ್ಯದ ಅಶ್ವತ್ಥಕಟ್ಟೆ ಬಳಿ ನಿನ್ನೆ ಗಿರಾಕಿಗಳಿಗೆ ಹಾಗೂ ಪಿಜಿ ನಿವಾಸಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪರಪ್ಪನ ಅಗ್ರಹಾರ ಫೋಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯು 5 ವರ್ಷಗಳ ಹಿಂದೆ ಹೊಸೂರಿನ ಸಿಪ್‍ಕಾರ್ಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಚಿಲ್ಲಕೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದನು
ಜೈಲಿಗೆ ಹೋಗಿ ಬಂದಿದ್ದ
ಜೀವನ ನಿರ್ವಹಣೆಗೆ ಹಣ ಸಾಕಾಗದೆ ಹಾಗೂ ಐಷಾರಾಮಿ ಜೀವನಕ್ಕೆ ಮಾರುಹೋಗಿ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಹಾಗೂ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ಅಂಗಡಿಯಲ್ಲಿ ಚಿಕ್ಕ ಪ್ಯಾಕೆಟ್‍ಗಳಲ್ಲಿ ಕಟ್ಟಿ ಪರಪ್ಪನ ಅಗ್ರಹಾರದ ವಿವಿಧೆಡೆ ಸುತ್ತಾಡುತ್ತ ಮಾರಾಟ ಮಾಡುತ್ತಿರುವುದನ್ನು ಆರೋಪಿಯು ಬಾಯ್ಬಿಟ್ಟಿದ್ದಾನೆ.
ಆರೋಪಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಮತ್ತಿಬ್ಬರ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿದೆ.
![](https://prajapragathi.com/wp-content/uploads/2018/08/ganja.jpg)