ತುಮಕೂರು:
ಕನ್ನಡ ಅಧ್ಯಯನ ಕೇಂದ್ರ ಯಾವತ್ತೂ ಭಾಷಾ ವಿಭಾಗ ಅಲ್ಲ. ಅದೊಂದು ಮಾನವಿಕ ವಿಷಯಗಳ ಅಧ್ಯಯನ ವಿಭಾಗ ಎಂದು ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ನಿತ್ಯಾನಂದ ಬಿ.ಶೆಟ್ಟಿ ಹೇಳಿದರು.
ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ.ಎ ಕನ್ನಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜ್ಞಾನ, ಸಮಾಜವಿಜ್ಞಾನ ಹಾಗೂ ಮಾನವಿಕ ಈ ಮೂರು ಬೇರೆ ಬೇರೆ ಕ್ಷೇತ್ರಗಳು. ಕನ್ನಡ ವಿಭಾಗಕ್ಕೆ ಮಾತ್ರ ವಿಜ್ಞಾನವನ್ನು, ಸಮಾಜವಿಜ್ಞಾನವನ್ನು ಧರಿಸುವುದಕ್ಕೆ ಸಾಧ್ಯ. ವಿಜ್ಞಾನಕ್ಕೆ ಮನುಷ್ಯನ ಹಂಗಿಲ್ಲ. ಸಮಾಜವಿಜ್ಞಾನಕ್ಕೆ ವಿಜ್ಞಾನದ ಹಂಗಿಲ್ಲ. ಆದರೆ ನಮಗೆ ಎಲ್ಲದರ ಋಣವೂ ಇದೆ, ಎಲ್ಲದರ ಬಗ್ಗೆ ವಿಮರ್ಶೆ ಮಾಡುವ ಅಧಿಕಾರವೂ ಇದೆ. ಆ ವಿಮರ್ಶೆಯನ್ನು ವಿನಯದಿಂದ ಮಂಡಿಸುವ ಬೌದ್ಧಿಕತೆಯೂ ಇದೆ ಎಂದರು.
ಕನ್ನಡ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಭಾಷೆ, ಜಾನಪದ, ಹಳಗನ್ನಡ, ಸಂಸ್ಕøತಿ ಇತರ ವಿಷಯಗಳೆಲ್ಲವೂ ಅಧ್ಯಯನದ ಸೂಕ್ಷ್ಮ ಕ್ಷೇತ್ರಗಳು. ಈ ಸೂಕ್ಷ್ಮ ಕ್ಷೇತ್ರಗಳೆಲ್ಲವನ್ನೂ ಪೊರೆದಿರುವುದು ಮತ್ತು ಆಧರಿಸಿರುವುದು ಮಾನವಿಕ ಕ್ಷೇತ್ರ. ಹಾಗಾಗಿ ವಿದ್ಯಾರ್ಥಿಗಳು ಮಾನವಿಕ ಎಂದರೇನು, ಮಾನವಿಕದ ಕೆಲಸವೇನು, ಮಾನವಿಕದ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸವೇನು ಎಂದು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಕೈ ಹಿಡಿದು ನಡೆಸುವ ಪ್ರಶ್ನೆಗಳೊಂದಿಗೆ ಸಾಗಬೇಕು ಎಂದರು. ವಿದ್ಯಾರ್ಥಿಗಳಿಗೆ ಶ್ರೇಷ್ಠ ಹಾಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಬಯಸುವುದು ಅಧ್ಯಾಪಕರ ಸ್ವಧರ್ಮ. ಅಧ್ಯಾಪಕರಾದ ನಾವು ನಮಗೆ ನಾವೇ ಪ್ರಶ್ನೆ ಮಾಡಿಕೊಂಡು, ಸ್ವವಿಮರ್ಶೆಗೆ ಒಳಪಡಿಸಿಕೊಂಡು ಜೀವಿಸುತ್ತಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ನಿಮಗೆ ನೀವೆ ಪ್ರಶ್ನಿಸಿಕೊಳ್ಳುವ ಮೂಲಕ ಸ್ವವಿಮರ್ಶೆಗೆ ಒಳಗಾಗಬೇಕು ಎಂದರು.
ಪ್ರಾಧ್ಯಾಪಕಿ ಡಾ.ಅಣ್ಣಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳಬಾರದು. ಪಠ್ಯದಾಚೆಗೂ ಅಧ್ಯಯನ ಮಾಡುತ್ತಾ ಅಧ್ಯಾಪಕರು ಸೂಚಿಸುವ ಮಾರ್ಗದಲ್ಲಿ ಸಾಗಬೇಕು ಎಂದರು. ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ವಿದ್ಯಾರ್ಥಿಗಳು ಓದುವುದನ್ನು ಧ್ಯಾನ ಎಂದು ಭಾವಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನನ್ನು ಓದುತ್ತಾರೋ ಅದನ್ನು ಭವಿಷ್ಯದಲ್ಲಿ ಪಡೆಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮನ್ನು ಓದು ಬರಹಕ್ಕೆ ಒಡ್ಡಿಕೊಳ್ಳಬೇಕು ಎಂದರು.
ಓದುವ ವಿದ್ಯಾರ್ಥಿ ಒಳ್ಳೆಯ ಅಧ್ಯಾಪಕನಾಗಬಲ್ಲ. ಹಾಗೆಯೇ ವಿದ್ಯಾರ್ಥಿಗಳು ಯಾವ ಅಧ್ಯಾಪಕರ ರೀತಿ ಇರಬಾರದು ಮತ್ತು ಯಾವ ಅಧ್ಯಾಪಕರ ರೀತಿ ಇರಬೇಕು ಎಂಬ ಎರಡು ಮಾದರಿಗಳನ್ನು ಇಟ್ಟುಕೊಳ್ಳಬೇಕು. ಓದನ್ನು ಧ್ಯಾನ ಎಂದು ಜಪಿಸಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಎಂ.ಗಂಗಾಧಯ್ಯ, ಡಾ.ನಟರಾಜ್ ಮಾತನಾಡಿದರು. ಸಂಶೋಧನಾರ್ಥಿಗಳಾದ ರಮೇಶ್, ರಂಗಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.