ಹೊಸಪೇಟೆ:
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ನಗರಸಭೆ ಅನುಮೋದನೆ ಪಡೆಯದೆ ಟೌನ್ ರೀಡಿಂಗ್ ಸುತ್ತ ನಿರ್ಮಿಸಿರುವ ಮಳಿಗೆಗಳ ಹಂಚಿಕೆಗೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು.
ನಗರದ ಟೌನ್ ರೀಡಿಂಗ್ ಸುತ್ತ ನಿರ್ಮಿಸಿರುವ ಮಳಿಗೆಗಳನ್ನು ಹಲವು ವರ್ಷಗಳಿಂದ ಗೂಡಂಗಡಿಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದವರಿಗೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಅನುಮೋದನೆ ಪಡೆಯದೆ ನಗರದ ಟೌನ್ ರೀಡಿಂಗ್ ಸುತ್ತ ನಿರ್ಮಿಸಿರುವ ಮಳಿಗೆಗಳ ಹಂಚಿಕೆಗೆ ಸಂಬಂಧಿಸಿ ಫಲಾನುಭವಿಗಳ ಪಟ್ಟಿ ಸಿದ್ಧಗೊಳಿಸಿರುವುದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ವೇಣುಗೋಪಾಲ್ ಮಾತನಾಡಿ, ನಗರೋತ್ಥಾನ ಯೋಜನೆಯ ಅಡಿಯಲ್ಲಿ ಈಗ ನಿರ್ಮಿಸಿರುವ ಮಳಿಗೆಗಳ ಜಾಗದಲ್ಲಿ ಅನೇಕ ವರ್ಷಗಳಿಂದ ಗೂಡಂಗಡಿಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದವರಿಗೆ ಮೊದಲ ಆದ್ಯತೆ ನೀಡಬೇಕು. ಅವರನ್ನು ಕಡೆಗಣಿಸಿ ಬೇರೆಯವರಿಗೆ ನೀಡಬಾರದು ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ರಾಮಚಂದ್ರ, ನಿಜವಾದ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ಇಲ್ಲ. ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರವೇ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಬೇಕು. ಅದು ಕೂಡ ಆಗಿಲ್ಲ. ಆದಕಾರಣ ಪಟ್ಟಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ಒಪ್ಪಿಗೆ ಮೇರೆಗೆ ಪಟ್ಟಿ ಸಿದ್ಧಗೊಳಿಸಲಾಗಿದೆ ಎಂದು ನಡಾವಳಿಯಲ್ಲಿ ಬರೆಯಲಾಗಿದೆ. ಆದರೆ, ಸಭೆ ಒಪ್ಪಿಗೆಯೇ ಇಲ್ಲ ಎಂದು ಚಿದಾನಂದಪ್ಪ ಸದಸ್ಯ ಗರಂ ಆದರು.
ಪೌರಾಯುಕ್ತ ವಿ. ರಮೇಶ್ ಮಾತನಾಡಿ, ಸಭೆಯ ನಡಾವಳಿಯನ್ನು ಸರಿಯಾಗಿ ಓದದೇ ಮಾತನಾಡುತ್ತಿದ್ದೀರಿ. ಇಲ್ಲಿಯವರೆಗೆ ಯಾರಿಗೂ ಮಳಿಗೆಗಳನ್ನು ಕೊಟ್ಟಿಲ್ಲ. ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಪಟ್ಟಿ ತಯಾರಿಸಲಾಗಿದೆ. ಶೇ 5ರಷ್ಟು ಅಂಗವಿಕಲರಿಗೆ ಮೀಸಲಿಡಲಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಬಾಡಿಗೆ ಗೊತ್ತು ಮಾಡಲಾಗುವುದು. ಬಳಿಕ ನಗರಸಭೆ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದು, ಜಿಲ್ಲಾಧಿಕಾರಿಗಳ ಬಳಿಗೆ ಕಳಿಸಿಕೊಡಲಾಗುವುದು ಎಂದು ಸಭೆಗೆ ವಿವರಣೆ ನೀಡಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಗುಜ್ಜಲ್ ನಿಂಗಪ್ಪ, ಮಳಿಗೆ ಹಂಚಿಕೆ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯೋಣ. ಈಗ 14ನೇ ಹಣಕಾಸು ಯೋಜನೆ ಕುರಿತು ಚರ್ಚಿಸಿ, ಒಪ್ಪಿಗೆ ನೀಡಬೇಕಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು. ಅರ್ಹ ಫಲಾನುಭವಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುವ ಹೊಣೆ ನನ್ನದು ಎಂದು ಭರವಸೆ ನೀಡಿದರು. ಬಳಿಕ ಸಭೆ ಸುಗಮವಾಗಿ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
