ಬಳ್ಳಾರಿಯ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ ( ವಿಮ್ಸ್) ಗೆ ವೈದ್ಯಕೀಯ ಶಿಕ್ಷಣ ಸಚಿವರಲ್ಲ ಯಾರು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಅದು ನಾಯಿ ಬಾಲ ಡೊಂಕು ಎಂಬಂತೆ ಅಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಜನರಲ್ಲಿ ಖಚಿತವಾಗಿದೆ. ಕಾರಣ ಸಚಿವರು, ಜನಪ್ರತಿನಿಧಿಗಳು ಭೇಟಿ ನೀಡಿದರೂ ಸಹ ಇಲ್ಲಿ ಸಮಸ್ಯೆ ಬಗೆಹರಿಯಲಿಲ್ಲ.
ಈ ಹಿಂದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ವಿಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಇದು ವಿಮ್ಸ್ ಅಲ್ಲ ನರಕ ಎಂದು ಹೇಳಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಹೋಗಿದ್ದರು. ಆದರೆ, ಅವರ ಎದುರಿಗೆ ಮಾತ್ರ ಅಧಿಕಾರಿಗಳು ತಲೆಯಾಡಿಸಿ, ನಂತರ ತಮ್ಮ ಪಾಡಿಗೆ ತಾವು ಕೆಲಸ ಮುಂದುವರಿಸಿದ್ದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಇದೇ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ವಿಮ್ಸ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿಮ್ಸ್ ವೈದ್ಯರು ರೋಗಿಗಳಿಗೆ ಅವಶ್ಯಕತೆ ಇರುವ ಔಷಧಗಳನ್ನು ಹೊರಗಡೆ ತರಲು ಚೀಟಿ ಬರೆದುಕೊಡುತ್ತಾರೆ ಎಂದು ಗಮನ ಸೆಳೆದಾಗ, ಅಂತಹ ವೈದ್ಯರ ಬಗ್ಗೆ ನನ್ನ ಗಮನಕ್ಕೆ ತನ್ನಿ ನಾನು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಪತ್ರಿಕಾಗೋಷ್ಠಿ ಮುಗಿಸಿಕೊಂಡು ವಿಮ್ಸ್ ಭೇಟಿ ನೀಡಿದಾಗ, ರೋಗಿ ಸಂಬಂಧಿಯೊಬ್ಬರು ವೈದ್ಯರು ಚೀಟಿ ಬರೆದಿರುವ ಬಗ್ಗೆ ಸಚಿವರ ಗಮನೆ ಸೆಳೆದಾಗ, ಅದರ ಬಗ್ಗೆ ಕಿವಿಗೊಡದೇ ಮುಂದೆ ಸಾಗಿದರು. ಆಗ ರೋಗಿ ಸಂಬಂಧಿ ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ಹೊರಗಡೆ ಹೋಗಿ ಔಷಧಗಳನ್ನು ಕೊಂಡು ತಂದು ಕೊಳ್ಳಬೇಕಾಯಿತು.
ಆದರೆ, ಜನಪ್ರತಿನಿಧಿಗಳು, ಪತ್ರಿಕೆಗಳಿಗೆ ಹೇಳುವದೊಂದು ಹೊರಗಡೆ ಮಾಡುವುದು ಇನ್ನೊಂದು ಎಂಬುದು ಜನಪ್ರತಿನಿಧಿಗಳ ನಡತೆಯಿಂದ ಸಾಬೀತಾಗುತ್ತದೆ. ಈಗ ಸಮ್ಮಿಶ್ರ ಸರಕಾರ ವೈದ್ಯಕೀಯ ಶಿಕ್ಷಣ ಸಚಿವರು ಹಾಗು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರು ವಿಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಸಚಿವರು ಬರುವಾಗ ಮಾತ್ರ ಎಲ್ಲ ಕಡೆ ಅವರು ಬಂದು ಹೋಗುವವರೆಗೆ ಸ್ವಚ್ಛತೆಯನ್ನು ಕಾಪಾಡುತ್ತಾರೆ. ನಂತರ ಅದನ್ನು ಕೇಳುವವರೇ ಇಲ್ಲ.
ಆಸ್ಪತ್ರೆಗೆ ಭೇಟಿ ನೀಡಿದ್ದ ಸುಮಾರು 660 ಆಸನಗಳು, ಒಬ್ಬ ನಿರ್ದೇಶಕರು, 34 ಹೆಚ್‍ಒಡಿಗಳು, 45 ಜನ ಪ್ರೊಫೆಸರ್‍ಗಳು, 100 ಕ್ಕೂ ಹೆಚ್ಚು ಸೀನಿಯರ್ ವೈದ್ಯರು ಮತ್ತು ಜೂನಿಯರ್, ಸೀನಿಯರ್ ನರ್ಸ್‍ಗಳು ಸೇರಿ ಸುಮಾರು 750 ಕ್ಕೂ ಹೆಚ್ಚು ಸಿಬ್ಬಂದಿ. ಇಷ್ಟು ದೊಡ್ಡ ಆಸ್ಪತ್ರೆಗೆ ತಿಂಗಳಿಗೆ ಸುಮಾರು 1.5 ಕೋಟಿ ರು. ಗಳನ್ನು ಸರಕಾರ ಖರ್ಚು ಮಾಡುತ್ತಿದೆ. ಆದರೂ ಸಹ ಆಸ್ಪತ್ರೆಯನ್ನು ಇದು ಆಸ್ಪತ್ರೆಯಲ್ಲ. ಇದು ನರಕ ಎಂದು ಹೇಳಿರುವುದು ಬಳ್ಳಾರಿಗೆ ನಾಚಿಕೆಗೇಡು.
ಹೌದು ಇಲ್ಲಿ ಯಾರು ಏನು ಕೆಲಸ ಮಾಡುತ್ತಾರೋ ಗೊತ್ತಿಲ್ಲ. ರೋಗಿಗಳನ್ನು ಕೇಳುವವರೇ ಇಲ್ಲ. ಚಿಕಿತ್ಸೆ ಪಡೆಯಲೆಂದು ಆಗಮಿಸುವ ರೋಗಿಗಳಿಗೆ ನೇರವಾಗಿ ನರಕ ತೋರಿಸುವ ಮತ್ತು ಕಳುಹಿಸುವ ಜಾಗ ವಿಮ್ಸ್…!
ಈ ವಿಮ್ಸ್‍ನಲ್ಲಿರುವ ಬೆಡ್‍ಶಿಟ್‍ಗಳು, ಟ್ರೇಗಳು, ಶೌಚಾಲಯ ಮತ್ತು ರೋಗಿಗಳಿಗೆ ಒದಗಿಸಲಾಗುತ್ತಿರುವ ಸೌಕರ್ಯಗಳನ್ನು ನೋಡಿದಾಗ ನಾವು 1947ಕ್ಕಿಂತ ಮುಂಚೆ ಇದ್ದೇವಾ ಎಂಬ ಸಂಶಯ ಮೂಡುತ್ತದೆ. ಬೆಡ್‍ಗಳು ತೊಟ್ಟಿಲಾಗಿ ಮಾರ್ಪಟ್ಟಿವೆ; ಜಿರಲೆ, ತಿಗಣೆಗಳು ಅದರಲ್ಲಿ ಸೇರಿಕೊಂಡಿವೆ.
ಗ್ರೂಪ್ ಡಿ, ನರ್ಸ್‍ಗಳ ನಡವಳಿಕೆ ಸರಿಯಿಲ್ಲ, ನಿರ್ವಹಣೆ ಸರಿಯಿಲ್ಲ ಮತ್ತು ಸ್ವಚ್ಛತೆ ಎಂಬುದು ಕೇಳಲೇಬೇಡಿ.
ಮಹಿಳಾ ವಾರ್ಡ್ ಮತ್ತು ಲೇಬರ್ ವಾರ್ಡ್, ಮಕ್ಕಳ ವಾರ್ಡ್ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರೋಗಿಗೆ ಚಿಕಿತ್ಸೆ ಕೊಡಿಸಲು ಜತೆಗೆ ಬರುವವರು ಸಹ ಮತ್ತೊಂದು ರೋಗ ಹಚ್ಚಿಕೊಂಡು ಅದೇ ಬೇಡ್‍ಗೆ ಮಲಗುವಂತ ಸ್ಥಿತಿ ಇಲ್ಲಿದೆ . ಈ ವಿಮ್ಸ್‍ನಲ್ಲಿ ಎಲ್ಲೆಂದರೆಲ್ಲ ಲಂಚಾವತಾರ ತಾಂಡವಾಡುತ್ತಿದೆ. ವಿಮ್ಸ್ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನೊಂದಿಗೆ ಅಟ್ಯಾಚ್ ಇದ್ದು, ಇಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪಡೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಇದು ಮಾದರಿ ಆಸ್ಪತ್ರೆಯಾಗಬೇಕು. ಆದರೆ, ನ್ಯೂನ್ಯತೆ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆ ವ್ಯವಸ್ಥೆ ಸುಧಾರಿಸುವವರೆಗೆ ಇದನ್ನು ಮುಚ್ಚಿಹಾಕಿ.
ಆಸ್ಪತ್ರೆಯಲ್ಲಿ ಮೆಡಿಷನ್ ಸಮಸ್ಯೆ, ಬೆಡ್‍ಗಳ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಇನ್ನು ಇಡೀ ಆಸ್ಪತ್ರೆಯೇ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಅದರಲ್ಲೇ ರೋಗಿಗಳಿಗೆ ಚಿಕಿತ್ಸೆ. ದೊಡ್ಡ ದೊಡ್ಡವರು ಬಂದಾಗ ಮಾತ್ರ ಇಡೀ ಆಸ್ಪತ್ರೆಗೆ ಬ್ಲೀಚಿಂಗ್ ಪೌಡರ್ ಹಾಕಿರುತ್ತಾರೆ. ಆಸ್ಪತ್ರೆಯಲ್ಲಿ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ನಂತರದ ದಿನಗಳಲ್ಲಿ ಮತ್ತೆ ಯಥಾ ರಾಜಾ ತಥಾ ಪ್ರಜಾ ಎಂಬಂತೆ ನಾಯಿ ಬಾಲ ಡೊಂಕು.
ಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಆಸನಗಳೇ ಇರುವುದಿಲ್ಲ. ಒಂದೊಂದು ಬೆಡ್‍ನಲ್ಲಿ 3-4 ಮಕ್ಕಳನ್ನು ಮಲಗಿಸಲಾಗುತ್ತದೆ. ಇನ್ನು ಬಾಣಂತಿಯರ ಸಮಸ್ಯೆ ಹೇಳತೀರದು.
ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಅಥವಾ ರಾಜಕಾರಣಿಗಳು ಭೇಟಿ ನೀಡಿದಾಗ, ಮಾತ್ರ ಎಲ್ಲ ಸಮಸ್ಯೆ ಬಗರಹರಿಸುವ ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಳಿದ ದಿನಗಳಲ್ಲಿ ಸಹ ಇದೇ ರೀತಿ ಸ್ಪಂದಿಸಿದರೆ ಒಳಿತು.
ರಾಜ್ಯದಲ್ಲಿರುವ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮಸ್ಯೆ-ಸವಾಲುಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಗವರ್ನರ್ ಕೌನ್ಸಿಲಿಂಗ್ ಸಭೆ ನಡೆಸಿ ಈ ಸಂಸ್ಥೆ ಮತ್ತು ಆಸ್ಪತ್ರೆಗಳ ಸಮಸ್ಯೆಗಳನ್ನು ಕುರಿತು ಸುಧೀರ್ಘವಾಗಿ ಚರ್ಚಿಸಲಾಗುವುದು ಮತ್ತು ಅವುಗಳ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುವುದು. ವಿಜಯನಗರ ವೈದ್ಯಕೀಯ ಸಂಸ್ಥೆ ಮತ್ತು ಆಸ್ಪತ್ರೆ(ವಿಮ್ಸ್) ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ವೈದ್ಯಕೀಯ ಸಂಸ್ಥೆಗಳು ಮೂಲಸೌಕರ್ಯ, ಅನುದಾನದ ಕೊರತೆ, ಕಟ್ಟಡ, ಸಿಬ್ಬಂದಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ. ಇದಕ್ಕಾಗಿ ಗವರ್ನರ್ ಕೌನ್ಸಿಲಿಂಗ್ ಸಭೆಯನ್ನು ಒಂದು ದಿನ ನಡೆಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ.
– ಡಿ.ಕೆ.ಶಿವಕುಮಾರ, ವೈದ್ಯಕೀಯ ಶಿಕ್ಷಣ ಸಚಿವ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ