ಬೆಂಗಳೂರು:
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡುವ ವಿಚಾರದ ಬಗ್ಗೆ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.ವರ ಮಹಾಲಕ್ಷ್ಮಿ ಹಬ್ಬದ ಕೊಡುಗೆಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲ ಮನ್ನಾ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆ ರೈತ ಸಮುದಾಯದಲ್ಲಿದೆ.
ಕಳೆದ ಸಚಿವ ಸಂಪುಟ ಸಭೆ ಸಂದರ್ಭದಲ್ಲಿ ಸಾಲಮನ್ನಾ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದರು.ಇದಲ್ಲದೇ ಸಭೆಯಲ್ಲಿ ನೆರೆ ಹಾಗೂ ಬರ ಪರಿಸ್ಥಿತಿ ಕುರಿತಂತೆಯೂ ಸಹ ಚರ್ಚೆ ನಡೆಯುವ ಸಂಭವವಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಕೊಡಗು ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
ನೆರೆ ಹಾಗೂ ಬರ ಪರಿಸ್ಥಿತಿ ನಿರ್ವಹಣೆಗೆ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದೆ.ನೆರೆ ಸಂತ್ರಸ್ತರ ವಿಚಾರದಲ್ಲಿ ರೇವಣ್ಣ ತೋರಿದ ತಾತ್ಸಾರ ಭಾವನೆ, ಆಡಳಿತಾತ್ಮಕ ವಿಚಾರದಲ್ಲಿ ರೇವಣ್ಣ ಮೂಗು ತೂರಿಸುವ ವಿಚಾರವು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.








