ಹೊನ್ನವಳ್ಳಿ
ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ವತಿಯಿಂದ ಕರ್ನಾಟಕ ಕೃಷಿ ಬೆಲೆ ಆಯೋಗ, ಕರ್ನಾಟಕ ಸರ್ಕಾರ ಪ್ರಾಯೋಜಿತ ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ ಯೋಜನೆಯಡಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹುಲ್ಲುಕಟ್ಟೆ ಗ್ರಾಮದಲ್ಲಿ ಆ.21ರಂದು ಇಲಾಖಾವಾರು ಪ್ರಸ್ತುತ ಸಾಲಿಗೆ ರೈತರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ನೀಡಲು ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಗ್ರಾಮಸಭೆಯಲ್ಲಿ ಕೃಷಿ ಅಧಿಕಾರಿಗಳಾದ ಸವಿತ, ತೋಟಗಾರಿಕ ಸಹಾಯಕರಾದ ರತ್ನಮ್ಮ, ಪಶುಸಂಗೋಪನಾ ಇಲಾಖೆಯ ವಿಸ್ತರಣಾ ಅಧಿಕಾರಿಗಳಾದ ಮಹೇಶ್, ರೇಶ್ಮೆ ಇಲಾಖೆಯ ವಿಸ್ತರಣಾ ಅಧಿಕಾರಿಗಳಾದ ಶಿವನಂಜಪ್ಪ, ಅರಣ್ಯ ಪಾಲಕರಾದ ನೀಲಮ್ಮ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ತಮ್ಮ ತಮ್ಮ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿ ಯೋಜನೆಗಳ ಲಾಭ ಪಡೆಯುವಂತೆ ತಿಳಿಸಿದರು. ಕರ್ನಾಟಕ ಕೃಷಿ ಬೆಲೆ ಆಯೋಗ, ಕರ್ನಾಟಕ ಸರ್ಕಾರ ಪ್ರಾಯೋಜಿತ ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ ಯೋಜನೆಯ ಆಯ್ದ ಗ್ರಾಮಗಳಾದ ಹುಲ್ಲುಕಟ್ಟೆ ಮತ್ತು ಕೊಪ್ಪ ಗ್ರಾಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದರು.
ಗ್ರಾಮಸಭೆಯಲ್ಲಿ ಯೋಜನೆಯ ಮುಂಚೂಣಿ ಪ್ರಾತ್ಯಕ್ಷಿಕೆಗೆ ಆಯ್ದ ರೈತರ ಮಣ್ಣು ಪರೀಕ್ಷೆಯ ಫಲಿತಾಂಶ ಚೀಟಿಗಳನ್ನು ಆಯ್ದ ರೈತರಿಗೆ ಈಚನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗಿರೀಶ್‍ರವರು ಫಲಾನುಭವಿಗಳಿಗೆ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ನಾಗಪ್ಪ ದೇಸಾಯಿ, ಡಾ. ಅನಿತಾ, ಡಾ. ಶಂಕರ್, ಡಾ. ಶಿವಪ್ಪ ನಾಯಕ್ ಹಾಗೂ ಯೋಜನೆಯ ಸಂಶೋಧನಾ ಸಹಾಯಕರಾದ ಕುಮಾರಿ ವೀಣಾ, ಕ್ಷೇತ್ರ ಸಹಾಯಕರಾದ ಕರಿಯಪ್ಪ ಹಾಗೂ ಹುಲ್ಲುಕಟ್ಟೆ ಮತ್ತು ಕೊಪ್ಪಾದ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಚನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗಿರೀಶ್ ವಹಿಸಿಕೊಂಡಿದ್ದರು.








