ತುಮಕೂರು:
ಕಲ್ಪತರು ನಾಡು ಎಂದೇ ಪ್ರಸಿದ್ದವಾಗಿರುವ ತುಮಕೂರು ಜಿಲ್ಲೆಯಲ್ಲಿ ತೆಂಗು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು ೨,೨೪,೫೦೪ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕಳದೆ ವರ್ಷದ ಮಳೆಯ ಅಭಾವದಿಂದ ತೆಂಗು ಬೆಳೆಗಾರರು ತೋಟಗಳನ್ನು ನಿರ್ವಹಣೆ ಮಾಡಿ ಉಳಿಸಿಕೊಳ್ಳಲು ಸಾಧ್ಯವಾಗದೇ ಬಹಳಷ್ಟು ನಷ್ಟವನ್ನು ಅನುಭವಿಸಿದ್ದಾರೆ.
ತೆಂಗು ಬೆಳೆಯ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೃತಿಕಾ ಮಳೆಯಾಗುತ್ತಿರುವುದರಿಂದ ತೆಂಗು ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಹಂತದಲ್ಲಿ ತೆಂಗು ಬೆಳೆಗಾರರು ತಮ್ಮ ತೋಟಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ. ಬಹಳ ಮುಖ್ಯವಾಗಿ ರೈತರು ತಮ್ಮ ತೋಟಗಳಲ್ಲಿ ತೇವಾಂಶ ನಿರ್ವಹಣೆ, ಕಳೆ ನಿರ್ವಹಣೆ ಹಾಗೂ ಫಲವತ್ತತೆ ನಿರ್ವಹಣೆ ಮಾಡಲು ಗಮನ ಹರಿಸಬೇಕಾಗುತ್ತದೆ.
ತೇವಾಂಶ ನಿರ್ವಹಣೆ: ಈಗ ಬರುತ್ತಿರುವ ಮಳೆಯ ನೀರನ್ನು ತಮ್ಮ ತೋಟಗಳಿಂದ ಹರಿದು ಹೋಗದಂತೆ ತಡೆಯುವ ಕ್ರಮಗಳನ್ನು ಅನುಸರಿಸಬೇಕು.
ರೈತರು ತೋಟಗಳಲ್ಲಿ ಸರಿಯಾದ ಕಂದಕ ಬದುಗಳನ್ನು (ಖಿಡಿeಟಿಛಿh ಛಿum buಟಿಜ) ಮಾಡುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿರುತ್ತದೆ. ಇದರೊಟ್ಟಿಗೆ ತಮ್ಮ ಜಮೀನಿನಲ್ಲಿ ಕೃಷಿಹೊಂಡ ನಿರ್ಮಾಣ ಮಾಡುವುದರಿಂದ ಮಳೆ ನೀರನ್ನು ಸಂಗ್ರಹಣೆ ಮಾಡಿ ಮುಂದಿನ ದಿನಗಳಲ್ಲಿ ಮರು ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.
ಉಳುಮೆ ಮಾಡುವಾಗ ಇಳಿಜಾರಿಗೆ ಅಡ್ಡಲಾಗಿ ಗೆರೆಗಳು ಬರುವಂತೆ ಉಳುಮೆ ಮಾಡುವುದರಿಂದ ಹೆಚ್ಚು ಮಳೆ ನೀರು ಹಿಂಗಲು ಸಹಕಾರಿಯಾಗುತ್ತದೆ ಮತ್ತು ಮಣ್ಣಿನ ಸವಕಳಿಯು ಸಹ ಕಡಿಮೆಯಾಗುತ್ತದೆ.
ಕೊಳವೆ ಬಾವಿಗಳು ಸುಮಾರು ೮೦೦-೧೦೦೦ ಅಡಿಗಳವರೆಗೆ ಹೋಗಿರುವುದರಿಂದ ನೀರು ಮರು ಪೂರ್ಣ ಕಾಮಗಾರಿ ಮಾಡುವುದರಿಂದ ಕೊಳವೆ ಬಾವಿಗಳ ನೀರಿನ ಮಟ್ಟ ಸುದಾರಣೆಯಾಗುತ್ತದೆ. ನೀರು ಇಲ್ಲದ ದಿನಗಳಲ್ಲಿ ತೋಟಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿರುತ್ತದೆ. ಬಹಳ ಪ್ರಮುಖವಾಗಿ ಮಳೆಗಾಲದಲ್ಲಿ ರೈತರು ಸಾಮಾನ್ಯವಾಗಿ ಹಾಯಿ ನೀರು ಪದ್ಧತಿ ಅನುಸರಿಸುತ್ತಾರೆ. ಇದು ಮುಂದಿನ ದಿನಗಳಲ್ಲಿ ನಮಗೆ ನೀರಿನ ಅಭಾವ ಹೆಚ್ಚಾಗುವಂತೆ ಮಾಡುವುದರಿಂದ ಮಳೆಗಾಲದಲ್ಲೂ ಸಹ ಹನಿ ನೀರಾವರಿ ಪದ್ಧತಿ ಮೂಲಕವೇ ನೀರು ಹಾಯಿಸುವುದರಿಂದ ಸಸ್ಯ ಸಂರಕ್ಷಣೆ ಹಾಗೂ ಉತ್ತಮ ಇಳುವರಿ ಪಡೆಯಬಹುದು.
ಕಳೆ ನಿರ್ವಹಣೆ: ತೆಂಗು ಬೆಳೆ ಉತ್ತಮ ಇಳುವರಿ ನೀಡಲು ಲಭ್ಯವಿರುವ ಪೋಷಕಾಂಶಗಳು ತೆಂಗು ಬೆಳೆಗೆ ಸಿಗುವಂತೆ ಮಾಡುವುದು ಅತ್ಯಂತ ಮುಖ್ಯ. ಅದುದರಿಂದ ಕಳೆ ನಿರ್ವಹಣೆ ಮಾಡುವುದು ಪ್ರಮುಖ ವಿಧಾನವಾಗಿರುತ್ತದೆ.
ಮುಂಗಾರು ಮಳೆ ಆರಂಭದ ಹಂತದಲ್ಲಿ ಲಘುವಾದ ಉಳುಮೆ ಮಾಡುವುದರಿಂದ ಕಳೆ ತೆಗೆಯುವುದರ ಜೊತೆ ಕಳೆ ಬೀಜಗಳು ವಾತಾವರಣಕ್ಕೆ ಬರುವುದರಿಂದ ಸೂರ್ಯನ ಶಾಖಕ್ಕೆ ಮೊಳಕೆಯೊಡೆಯುವ ಸಾಮಾರ್ಥ್ಯ ಕಳೆದುಕೊಳ್ಳುತ್ತವೆ ಮತ್ತು ಹಕ್ಕಿ ಪಕ್ಷಿಗಳು ಅಹಾರವಾಗಿ ಬಕ್ಷಿಸುವುದರಿಂದ ಕಳೆ ಬೆಳೆಯುವುದು ಕಡಿಮೆಯಾಗುತ್ತದೆ. ಇದರಿಂದ ತೆಂಗಿನ ತೋಟದಲ್ಲಿ ರೈತರು ಹುಳು ಹುಪ್ಪಟಗಳ ಭಯವಿಲ್ಲದೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಹಕಾರಿಯಾಗುತ್ತದೆ.
ಹಸಿರೆಲೆ ಗೊಬ್ಬರದ ಬೀಜಗಳು, ಮೇವು ಬೀಜಗಳನ್ನು ಬಿತ್ತನೆ ಮಾಡುವುದರಿಂದಲೂ ಕಳೆ ನಿರ್ವಹಣೆ ಮಾಡಬಹುದು.
ತೆಂಗಿನ ಗರಿ/ಸೊಗೆಯಿಂದ ಮರದ ಬುಡದಲ್ಲಿ ಹೊದಿಕೆ (ಮಲ್ಚಿಂಗ್) ಮಾಡುವುದರಿಂದ ಕಳೆ ನಿರ್ವಹಣೆ ಮಾಡುವುದಲ್ಲದೆ ಉತ್ತಮ ಇಳುವರಿ ಪಡೆಯಬಹುದು.
ಪೋಷಕಾಂಶಗಳ ನಿರ್ವಹಣೆ: ತೆಂಗು ಬೆಳೆಗೆ ಸಮರ್ಪಕ ನೀರು ಮತ್ತು ಪೋಷಕಾಂಶ ನಿರ್ಹವಣೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಹಾಗೂ ಪೋಷಕಾಂಶ ನಿರ್ವಹಣೆಯಲ್ಲಿ ಸಾವಯಮ ಗೊಬ್ಬರ ಬಳಕೆಯೊಂದಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಕ್ರಮಗಳನ್ನು ಅನುಸರಣೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಮೊದಲಿಗೆ ತೋಟಗಳಿಗೆ ಹಸಿರೆಲೆ ಗೊಬ್ಬರವನ್ನು ಹಾಕುವುದು ಹಾಗೂ ಹಸಿರಲೆ ಗೊಬ್ಬರದ ಬೀಜಗಳಾದ ಸೆಣಬು, ಡಯಾಂಚ, ಮುಕುನ, ಹುರುಳಿ ಇನ್ನು ಹಲವು ದ್ವಿದಳ ಧಾನ್ಯಗಳ ಬಿತ್ತನೆ ಮಾಡಿ ಸರಿಯಾದ ಹಂತದಲ್ಲಿ ಅಂದರೆ ಹೂ ಬಿಡಲು ಆರಂಭವಾದ ಹಂತದಲ್ಲಿ ಮಣ್ಣಿನಲ್ಲಿ ಮಿಶ್ರಣ ಮಾಡುವುದು(ರೋಟವೇಟರ್ ಮೂಲಕ).ಇವು ವಾತಾವರಣದಲ್ಲಿರುವ ಸಾರಾಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಣ ಮಾಡುವುದರೊಂದಿಗೆ ಸಾವಯವ ಇಂಗಾಲವನ್ನು ಹೆಚ್ಚಿಗೆ ಮಾಡುತ್ತದೆ.
ಪ್ರತಿ ತೆಂಗಿನ ಮರಕ್ಕೆ ಸುಮಾರು ೨೦-೨೫ ಕೆಜಿ ಕೊಟ್ಟಿಗೆ ಗೊಬ್ಬರ ಮತ್ತು ೫ ಕೆಜಿ ಬೇವಿನ ಹಿಂಡಿ ನೀಡುವುದು ಕಡ್ಡಾಯವಾಗಿರುತ್ತದೆ, ಇದರಿಂದ ಮಣ್ಣಿನ ಭೌತಿಕ ಮತ್ತು ವಿನ್ಯಾಸ ಗುಣಗಳು ಉತ್ತಮಗೊಂಡು ಸೂಕ್ಷಾ÷್ಮಣು ಜೀವಿಗಳ ಚಟುವಟಿಕೆ ಸುದಾರಣೆಯಾಗುತ್ತದೆ ಹಾಗೂ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯ, ತೇವಾಂಶ ಮತ್ತು ಪೋಷಕಾಂಶದ ಲಭ್ಯತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಮತ್ತು ನೀರು ಪರೀಕ್ಷೆ ಮಾಡಿಸುವುದರಿಂದ ತೋಟಗಳಿಗೆ ಬೇಕಾಗುವಂತಹ ರಾಸಾಯನಿಕ ಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ನೀಡಬಹುದಾಗಿರುತ್ತದೆ.
ತೋಟಗಾರಿಕೆ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳಿಂದ ತೆಂಗು ಬೆಳೆಗೆ ವಾರ್ಷಿಕ ೫೦೦ ಗ್ರಾಂ, ಯೂರಿಯಾ, ೩೫೦ ಗ್ರಾಂ ಡಿ.ಎ.ಪಿ ಹಾಗೂ ೧ ಕೆಜಿ ಪೊಟ್ಯಾಶ್ ಗಳನ್ನು ಪೂರ್ವ ಮುಂಗಾರು ಅಂದರೆ ಜೂನ್ ಜುಲೈ ತಿಂಗಳಿನಲ್ಲಿ ಹಾಗೂ ೫೦೦ ಗ್ರಾಂ, ಯೂರಿಯಾ, ೩೫೦ ಗ್ರಾಂ ಡಿ.ಎ.ಪಿ ಹಾಗೂ ೧ ಕೆಜಿ ಪೊಟ್ಯಾಶ್ ಗಳನ್ನು ಮುಂಗಾರು ಕೊನೆಯ ಹಂತದಲ್ಲಿ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನೀಡುವುದು ಹಾಗೂ ಲಘು ಪೋಷಕಾಂಶಗಳಾದ ಬೋರಾನ್, ಜಿಂಕ್, ಸಲ್ಫೇಟ್ ಗಳನ್ನು ವಿಜ್ಞಾನಿಗಳು/ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಂತೆ ನೀಡುವುದರಿಂದ ರೈತರು ತಮ್ಮ ತೋಟಗಳನ್ನು ಉತ್ತಮವಾಗಿ ಪೋಷಕಾಂಶಗಳ ನಿರ್ವಹಣೆ ಮಾಡುವುದರಿಂದ ತೆಂಗಿನ ತೋಟಗಳ ಸಸ್ಯ ಸಂರಕ್ಷಣೆ ಮತ್ತು ಉತ್ತಮ ಇಳುವರಿ ಪಡೆಯಬಹುದು.
ಈ ಮೇಲಿನ ಬೇಸಾಯ ಕ್ರಮಗಳನ್ನು ರೈತರು ತಮ್ಮ ತೆಂಗಿನ ತೋಟಗಳಲ್ಲಿ ಅನುಸರಿಸಬೇಕಾಗಿ ವಿನಂತಿ ಇನ್ನು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕ ಮಾಡಲು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ