ಬಳ್ಳಾರಿ:
ದಾವಣಗೆರೆ ಜಿಲ್ಲೆ ಹರಿಹರದ ಪುಣ್ಯಕ್ಷೇತ್ರ ಶ್ರೀ ಉಕ್ಕಡಗಾತ್ರಿ ಅಜ್ಜಯ್ಯನ ಸನ್ನಿಧಿಗೆ ಶ್ರಾವಣ ಮಾಸದ ಪ್ರಯುಕ್ತ ಹೊನ್ನಳ್ಳಿ ಮತ್ತು ಸುತ್ತಮುತ್ತಲ ಹಲವಾರು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ತಾಲೂಕಿನ ಹೊನ್ನಳ್ಳಿ ತಾಂಡಾದ ಶ್ರೀ ಅಜ್ಜಯ್ಯ ಮಂದಿರವು ಕಳೆದ 12 ವರ್ಷದ ಹಿಂದೆಯೇ ಪ್ರತಿಷ್ಢಾಪನೆಗೊಂಡು ಸುತ್ತಮುತ್ತಲ ಗ್ರಾಮಗಳಲ್ಲಿ ಭಕ್ತಿಸುಧೆಯನ್ನು ಪಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ ಶ್ರೀ ಕರಿಬಸವೇಶ್ವರ ಸ್ವಾಮಿಯ ಶಿಷ್ಯರಾದ ಹೇಮಜ್ಜಯ್ಯ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. 7 ದಿನದ ಈ ಪಾದಯಾತ್ರೆಯುದ್ದಕ್ಕೂ ಶ್ರೀ ಕರಿಸಬಸವೇಶ್ವರ ಸ್ವಾಮಿಯ ಪೂಜೆ, ಭಜನೆ ಮಾಡುವ ಮೂಲಕ ಜನರಲ್ಲಿ ಭಕ್ತಿಯ ಹೊನಲು ಹರಿಸಲಾಗುತ್ತಿದೆ. 212 ಕಿ.ಮೀ. ಅಂತರದಲ್ಲಿರುವ ಅಜ್ಜಯ್ಯನ ಸನ್ನಿಧಿಗೆ ತೆರಳುವ ಪಾದಯಾತ್ರಿಗಳಿಗೆ ಭಕ್ತರು ವಿಶ್ರಾಂತಿ ಹಾಗೂ ಭೋಜನದ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಪಾದಯಾತ್ರೆ ಆರಂಭಗೊಂಡು ನಾಲ್ಕು ದಿನ ಗತಿಸಿದೆ. ಶನಿವಾರ ಅಥವಾ ಭಾನುವಾರಕ್ಕೆ ಯಾತ್ರೆ ಉಕ್ಕಡಗಾತ್ರಿ ಶ್ರೀಕ್ಷೇತ್ರ ತಲುಪಲಿದೆ. ಮಳೆ, ಬೆಳೆಯಿಂದ ಇಳೆ ಕಂಗೊಳಿಸಲಿ. ಜನರಲ್ಲಿ ಆಧ್ಯಾತ್ಮಿಕ ಮನೋಭಾವನೆ ಹೆಚ್ಚಲಿ. ಸನ್ನಡತೆ, ಸಚ್ಚಾರಿತ್ರ್ಯವಂತರಾಗುವ ಮೂಲಕ ಸಮಾಜದ ಉನ್ನತಿಗೆ ಅಜ್ಜಯ್ಯನ ಕೃಪೆ ದೊರೆಯಲಿ ಎಂಬ ಸದಾಶಯದೊಂದಿಗೆ ಈ ಯಾತ್ರೆ ಹಮ್ಮಿಕೊಂಡಿರುವುದಾಗಿ ಅಜ್ಜಯ್ಯನ ಶಿಷ್ಯರಾದ ಹೇಮಜ್ಜಯ್ಯ ತಿಳಿಸಿದ್ದಾರೆ.
ಈ ಯಾತ್ರೆಯಲ್ಲಿ ಹೊನ್ನಳ್ಳಿ ತಾಂಡಾದ ಹೆಚ್.ಚಂದ್ರಾ ನಾಯ್ಕ, ಗೂರ್ಯಾ ನಾಯ್ಕ, ಸ್ವಾಮಿ ನಾಯ್ಕ, ಪೀರೂ ನಾಯ್ಕ, ಹನ್ನು ನಾಯ್ಕ, ಹನ್ನಾ ನಾಯ್ಕ, ಹೊನ್ನಳ್ಳಿಯ ಮಲ್ಲಿ, ಬಳ್ಳಾರಿಯ ಶಿವಸಿದ್ಧ, ಮಧು ಮತ್ತು ಮಧುಸೂದನ್ ಸೇರಿದಂತೆ ಇತರರು ಪಾಲ್ಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
