ರಸ್ತೆ ತುಂಡಾಗಿರುವುದನ್ನು ಕಂಡು ಭಯಬೀತರಾದರು

ಹುಳಿಯಾರು:

              ಹುಳಿಯಾರಿನಿಂದ ಕೊಡಗು ನೆರೆ ಪೀಡಿತರಿಗೆ ಪರಿಹಾರ ಸಾಮಗ್ರಿಗಳನ್ನು ಕೊಡಲು ಹೋದ ತಂಡ ಅಲ್ಲಿನ ಭೂ ಕುಸಿತದ ದೃಶ್ಯಗಳನ್ನು ಕಂಡು ಭಯ ಭೀತರಾದರು. ನಾವು ನಿಂತಿರುವ ಜಾಗ ಅದ್ಯಾವಾಗ ಕುಸಿಯುತ್ತದೆಯೋ ಎಂಬ ಆತಂಕದೊಂದಿದೆ ಕೊಡಗಿನಲ್ಲಿ ಕಾಲ ಕಳೆದರು.

                ಹೌದು ಹುಳಿಯಾರಿನಿಂದ ಕೊಡಗಿಗೆ ಹೋದ ತಂಡ ಮಕ್ಕಂದೂರಿನಲ್ಲಿ ಅರ್ಹ ಫಲಾನಿಭವಿಗಳಿದ್ದಾರೆಂಬ ಮಾಹಿತಿ ಪಡೆದು ಅಲ್ಲಿಗೆ ಮೊದಲು ತೆರಳಿತು. ಆದರೆ ಅಲ್ಲಿನ ಜನ ಊರನ್ನು ಖಾಲಿ ಮಾಡಿ ಗಂಜಿ ಕೇಂದ್ರ ಸೇರಿದ್ದು ಇಡೀ ಊರು ಬೀಕೋ ಎನ್ನುತ್ತಿತ್ತು. ಮತ್ತೊಂದು ಊರು ಸಿಗಬಹುದೆಂದು ಅಲ್ಲಿಂದ ಸೋಮವಾರ ಪೇಟೆ ಕಡೆ ಹೊರಟರೆ ಅಚ್ಚರಿ ಹಾಗೂ ಗಾಭರಿಯನ್ನು ಒಮ್ಮಲೆ ಸೃಷ್ಠಿಸುವಂತೆ ರಸ್ತೆಯೇ ಅರ್ಧಕ್ಕೆ ತುಂಡಾಗಿತ್ತು. ಮುಂದೆ ರಸ್ತೆಯೇ ಇಲ್ಲವೇನೋ ಎನ್ನುವಂತೆ ಗುಡ್ಡದ ಮಣ್ಣು ಆಕ್ರಮಿಸಿದೆ. ಇದು ಇಲ್ಲಿನ ಭಾರಿ ಪ್ರಕೃತಿ ವಿಕೋಪದ ಸೂಚಕವಾಗಿತ್ತು.

                ಅಲ್ಲಿಂದ ಮಂಗಳೂರು ರಸ್ತೆಯ ಕಡ ಹೊರಟರಂತೂ ದಾರಿಯುದ್ದಕ್ಕೂ ಅರ್ಧಕ್ಕೆ ಕುಸಿದಿರುವ ರಸ್ತೆಗಳು, ಕೊಚ್ಚಿ ಹೋಗಿರುವ ಮನೆಗಳ, ಗದ್ದೆಗಳ, ತೋಟಗಳ ದೃಶ್ಯ. ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೋಗಿರುವ ನಾವುಗಳೇ ಎಲ್ಲಿ ಕೊಚ್ಚಿ ಹೋಗುವೆವೋ ಎನ್ನುವಂತೆ ನೋಡಿದ ಕಡೆಯಲ್ಲೆಲ್ಲಾ ಅನಾಹುತಗಳು, ಕಾಲಿಟ್ಟ ಕಡೆಯಲ್ಲೆಲ್ಲಾ ಭೂಮಿ ಕುಸಿರಿರುವುದು. ಹೋದ ಮಾರ್ಗದಲ್ಲಿ ಪುನಃ ಬರುವಷ್ಠರಲ್ಲಿ ಆ ಮಾರ್ಗ ಕುಸಿದು ಬಂದ್ ಆಗಿರುವುದು.

                  ಅಬ್ಬಾ! ಎಂತಹ ಗಂಡೆದೆಯುಳ್ಳವರನ್ನೂ ಕ್ಷಣ ಕಾಲ ನಡುಗಿಸುವ ಆಘಾತಕಾರಿ ನೆರೆ ಹಾವಳಿ. ಜೊತೆಗೆ ಸರ್ವಸ್ವವನ್ನೂ ಕಳೆದುಕೊಂಡ ನಿವಾಸಿಗಳ ಆಕ್ರಂದನ. ಅಲ್ಲದೆ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ. ಒಟ್ಟಿನಲ್ಲಿ ಪರಿಹಾರ ಸಾಮಗ್ರಿಗಳನ್ನು ಎಷ್ಟೊತ್ತಿಗೆ ವಿತರಿಸಿ ಹಿಂದಿರುಗುತ್ತೇವೋ ಎನ್ನುವ ತಳಮಳ. ಇಷ್ಟರ ನಡುವೆಯೂ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಸವಾಲಾಗಿತ್ತು. ಆದರೂ ಛಲ ಬಿಡದೆ ಮದೆನಾಡು ಗ್ರಾಮ ಹುಡುಕಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿ ಹಿಂದಿರುಗುವಾಗ ಮೂಡಿದ ಕೃತಜ್ಞತೆಯ ಭಾವ, ಆತ್ಮ ತೃಪ್ತಿ, ಮನ ಸಂತೋಷವು ಎಲ್ಲಾ ಆತಂಕ, ಭಯ, ತಳಮಳವನ್ನೂ ಒಮ್ಮೆಲೆ ಮರೆಸಿ ಹೊಸ ಚೈತನ್ಯ ಸೃಷ್ಠಿಸಿತ್ತು.

Recent Articles

spot_img

Related Stories

Share via
Copy link