ಮೈತ್ರಿ ಸರ್ಕಾರ ಉರುಳುವುದಿಲ್ಲ : ಎಚ್.ಡಿ. ಕುಮಾರ ಸ್ವಾಮಿ ವಿಶ್ವಾಸ

ಬೆಂಗಳೂರು:

              ಯಾವ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳುವುದಿಲ್ಲ. ಸರ್ಕಾರ ಪತನಗೊಳ್ಳುತ್ತದೆ ಎಂದು ಮಾಧ್ಯಮಗಳು ಸಹ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.

              ಉತ್ತರ ಹಳ್ಳಿ ಮುಖ್ಯರಸ್ತೆಯಲ್ಲಿ ಸಮಾಜ ಸಂಪರ್ಕವೇದಿಕೆಯಿಂದ ನಿರ್ಮಿಸಿರುವ ಮಹಿಳಾ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 3ರಂದು ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ನೋಡಿದೆ. ಆ ಬಗ್ಗೆ ನನಗೆ ಚಿಂತೆ ಇಲ್ಲ. ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೇನೆ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ಆದರೆ ಇರುವಷ್ಟು ದಿನ ಕೈಲಾದಷ್ಟು ಜನ ಸೇವೆ ಮಾಡುತ್ತೇನೆ ಎಂದರು.

              ನನ್ನ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ನಾನು ಯಾವ ತಂತ್ರವನ್ನೂ ಮಾಡುವುದಿಲ್ಲ. ಇನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ಯಾರು ಕಾಯುತ್ತಿದ್ದಾರೋ ಅವರು ಅರ್ಥ ಮಾಡಿಕೊಳ್ಳಬೇಕು. ನಾನು ಶಾಸಕರ ಜತೆ ಹೇಗೆ ವರ್ತಿಸುತ್ತಿದ್ದೇನೆ. ಅವರ ಜತೆ ಎಂತಹಾ ಬಾಂಧವ್ಯ ಹೊಂದಿದ್ದೇನೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ ಎಂದು ಹೇಳಿದರು.

              ಈ ಸರ್ಕಾರ ಇನ್ನೆಷ್ಟು ದಿನ ಇರುತ್ತೆ ಎಂಬ ಲಘು ಭಾವನೆ ಹೊಂದಿರುವ ಅಧಿಕಾರಿಗಳಿಗೂ ಇಷ್ಟರಲ್ಲೇ ಚಾಟಿ ಬೀಸುತ್ತೇನೆ. ನಾನು ಜಾತಿಯ ಆಧಾರದ ಮೇಲೆ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ. ಯಾವ ಯಾವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ನನ್ಮ ಬಳಿ ಇದೆ ಎಂದು ಆಡಳಿತ ಶಾಹಿಗೆ ಎಚ್ಚರಿಕೆ ನೀಡಿದರು.

               ತಮ್ಮ ನೇತೃತ್ವದ ಸರ್ಕಾರ ಈ ತಿಂಗಳಾಂತ್ಯಕ್ಕೆ 100 ದಿನ ಪೂರೈಸುತ್ತಿದೆ. ಇಷ್ಟು ದಿನ ಅಧಿಕಾರಿಗಳು ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಮುಂದಾದರೂ ಜಾತಿ ರಾಜಕೀಯ, ಗುಂಪು ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ನಮ್ಮ ಕೈ ಜೋಡಿಸಿ. ಇಲ್ಲವಾದರೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದರು.

              ಪ್ರತಿಯೊಂದಕ್ಕೂ ನಾನು ಕೇಂದ್ರದ ಕಡೆ ಕೈ ಚಾಚುವುದಿಲ್ಲ. ರಾಜ್ಯದ ಜನ ಕೊಡುವ ತೆರಿಗೆ ಹಣದಲ್ಲೇ ಪ್ರಾಮಾಣಿಕವಾದ ಆಡಳಿತ ನೀಡುತ್ತೇನೆ ಎಂದು ಕುಮಾರ ಸ್ವಾಮಿ ಹೇಳಿದರು.

              ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಧ್ಯಮಗಳ ಮೇಲೆ ಕಿಡಿ ಕಾರಿದ ಕುಮಾರ ಸ್ವಾಮಿ, ಮಾಧ್ಯಮ ಮಿತ್ರರಿಗೂ ಕೈ ಜೋಡಿಸಿ ಮನವಿ ಮಾಡುತ್ತೇನೆ. ಉತ್ತಮವಾದ ಕೆಲಸಕ್ಕೆ ಪೆÇ್ರೀತ್ಸಾಹ ಕೊಡಿ. ಎಲ್ಲವನ್ನೂ ಹಳದಿ ಕಣ್ಣಿನಿಂದ ನೋಡುವುದು ಬೇಡ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

              ರೈತರ ಸಾಲ ಮನ್ನಾ ಮಾಡುವ ನಮ್ಮ ನಿರ್ಧಾರಕ್ಕೆ ಹಲವಾರು ಜನ ಅಡ್ಡಿ ಮಾಡಿದರು. ಈಗ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಉಳಿಸುತ್ತೇನೆ ಎಂಬ ಭ್ರಮೆ ನನಗೆ ಇಲ್ಲ. ನಾನು ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸಿ ಆಡಳಿತವನ್ನು ಬಿಗಿ ಮಾಡದೇ ಇದ್ದರೆ ಐದು ವರ್ಷಕಾಲ ಮುಖ್ಯಮಂತ್ರಿಯಾಗಿದ್ದರೂ ಏನು ಪ್ರಯೋಜನವಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು.

             ಆಡಳಿತದಲ್ಲಿ ಹಲವಾರು ಜನರು ಜಾತಿವಾರು ಪ್ರಭಾವ ಬಳಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಕಡಿವಾಣ ಹಾಕಬೇಕಾಗಿದೆ. ಎಲ್ಲ ವರ್ಗದ ಬಡವರು ಉಳಿಯಬೇಕು. ಅದಕ್ಕಾಗಿ ನಿನ್ನೆ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದೇವೆ. ಕುಮಾರಸ್ವಾಮಿ ಕೈಲಿ ಏನೂ ಆಗಲ್ಲ ಎನ್ನುತ್ತಿದ್ದರು. ಮೂರ್ನಾಲ್ಕು ತಿಂಗಳು ಕಾದರೆ ಎಲ್ಲವೂ ಗೊತ್ತಾಗಲಿದೆ. ಕ್ರಾಂತಿಕಾರಿ ವ್ಯವಸ್ಥೆ ಜಾರಿಗೆ ತರುತ್ತಿದ್ದೇನೆ. ಚಕ್ರಬಡ್ಡಿ. ಮೀಟರ್ ಬಡ್ಡಿಯನ್ನು ತಪ್ಪಿಸಲು ಸರ್ಕಾರದಿಂದಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಸರ್ಕಾರದಿಂದಲೇ ದಿನಕ್ಕೆ ಸಾವಿರ ರೂಪಾಯಿ ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದರು.

             ಸರ್ಕಾರಿ ನೌಕರರ 6ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ 16000 ಕೋಟಿ, ರೈತರ ಸಾಲ ಮನ್ನಾಗೆ 36,000 ಕೋಟಿ ರೂ. ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವ ಮಹತ್ವದ ಜವಾಬ್ದಾರಿ ತಮ್ಮ ಮೇಲಿದೆ ಎಂದು ಕುಮಾರ ಸ್ವಾಮಿ ಹೇಳಿದರು.

Recent Articles

spot_img

Related Stories

Share via
Copy link