
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರತಿಯೊಂದು ಯುದ್ಧ ವಿಮಾನಕ್ಕೂ ಅದು ಕಾರ್ಯಾಚರಿಸಬಹುದಾದ ಆಯುಷ್ಯ ಎನ್ನುವುದಿದೆ. ಭಾರತದ ಹಳೆಯ ಯುದ್ಧ ವಿಮಾನಗಳು ಈಗ ಮೌನವಾಗಿಯೇ ತಮ್ಮ ಕಾರ್ಯಾಚರಣಾ ಆಯುಷ್ಯದ ಕೊನೆಯತ್ತ ಸಾಗುತ್ತಿವೆ. ದಶಕಗಳ ಕಾಲ ಭಾರತದ ಆಕಾಶಗಳನ್ನು ರಕ್ಷಿಸುತ್ತಿದ್ದ ಜಾಗ್ವಾರ್, ಮಿರೇಜ್-2000 ಮತ್ತು ಮಿಗ್-29 ಯುದ್ಧ ವಿಮಾನಗಳು ಈಗ ನಿವೃತ್ತಿಯ ಅಂಚಿಗೆ ತಲುಪಿವೆ. ಈ ಸ್ಕಾ÷್ವಡ್ರನ್ಗಳು ನಿವೃತ್ತಿಗೊಂಡಾಗ ಅವುಗಳಿಗೆ ಪರ್ಯಾಯ ವಿಮಾನಗಳ ವ್ಯವಸ್ಥೆಯೂ ಆಗಬೇಕು. ತೇಜಸ್ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ಮಾರ್ಕ್ 2 ಈ ಸ್ಥಾನ ತುಂಬಲಿದೆ ಎನ್ನಲಾಗಿದೆ. ಇದು ಭಾರತೀಯ ವಿನ್ಯಾಸದ 4.5ನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು, ಮುಂದಿನ ಎರಡು ದಶಕಗಳ ಕಾಲ ಜವಾಬ್ದಾರಿ ನಿರ್ವಹಿಸಲಿದೆ. ಈ ವಿಮಾನ ಮಾರ್ಕ್-1ರಿಂದ ಎಷ್ಟು ಭಿನ್ನ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದು ಪಾಕಿಸ್ತಾನದ ಜೆಎಫ್-17 ಅಥವಾ ಚೀನಾದ ಜೆ-10 ಅನ್ನು ಎದುರಿಸಬಲ್ಲದೇ? ಇದೆಲ್ಲವನ್ನೂ ಈ ಲೇಖನದಲ್ಲಿ ಗಮನಿಸೋಣ.
ಮೊದಲನೆಯದಾಗಿ, ಮಾರ್ಕ್-2 ಎನ್ನುವುದು ಮಾರ್ಕ್-1ನ್ನೇ ಅಭಿವೃದ್ಧಿಪಡಿಸಿದ ವಿಮಾನವಲ್ಲ. ಇದು ಹೆಚ್ಚು ದೊಡ್ಡದಾದ ಮತ್ತು ತೂಕದ ವಿಮಾನವಾಗಿದ್ದು, ಇದರ ದೇಹ 2ರಿಂದ 2.5 ಮೀಟರ್ ಹೆಚ್ಚು ಉದ್ದವಾಗಿದೆ. ಮಾರ್ಕ್-1ರ ಗರಿಷ್ಠ ಟೇಕಾಫ್ ತೂಕ 13.5 ಟನ್ ಆಗಿದ್ದರೆ, ಮಾರ್ಕ್-2 17.5 ಟನ್ ತೂಕ ಹೊಂದಿದ್ದು, 4 ಟನ್ಗಳಷ್ಟು ಹೆಚ್ಚು ತೂಕವನ್ನು ಎತ್ತಬಲ್ಲದು. ಇದರ ಇಂಜಿನ್ನಲ್ಲೂ ಬದಲಾವಣೆ ನಡೆಸಲಾಗಿದೆ. ಮಾರ್ಕ್-1 ಜಿಇ-404 ಇಂಜಿನ್ ಹೊಂದಿದ್ದರೆ, ಮಾರ್ಕ್-2 ಹೆಚ್ಚು ಶಕ್ತಿಯುತವಾದ ಜಿಇ-414 ಇಂಜಿನ್ ಹೊಂದಿದೆ. ಈ ಹೆಚ್ಚುವರಿ ಥ್ರಸ್ಟ್ ನೈಜ ಸನ್ನಿವೇಶದಲ್ಲಿ ಹೆಚ್ಚು ಮುಖ್ಯವಾಗುತ್ತದೆ. ವಿಮಾನ ದೀರ್ಘಕಾಲ ಸೂಪರ್ಸಾನಿಕ್ ವೇಗವನ್ನು ಹೊಂದಬಲ್ಲದಾಗಿದ್ದು, ಲಡಾಖಿನ ತೆಳ್ಳಗಿನ, ಹೆಚ್ಚು ಎತ್ತರದ ಪ್ರದೇಶದಲ್ಲೂ ಉತ್ತಮವಾಗಿ ಕಾರ್ಯಾಚರಿಸಬಲ್ಲದು. ಇದು ಹೆಚ್ಚು ಆಂತರಿಕ ಇಂಧನ ಮತ್ತು ಹಾರ್ಡ್ ಪಾಯಿಂಟ್ಗಳನ್ನು (ರೆಕ್ಕೆಯ ಕೆಳಗೆ ಆಯುಧಗಳನ್ನು ಅಳವಡಿಸುವ ಜೋಡಣಾ ತಾಣ) ಹೊಂದಿದೆ.
ವಿಮಾನದಲ್ಲಿನ ಅತಿದೊಡ್ಡ ಸುಧಾರಣೆ ಎಂದರೆ ಅದರ ರೇಡಾರ್. ರೇಡಾರ್ ಎನ್ನುವುದು ಯುದ್ಧ ವಿಮಾನದ ಕಣ್ಣುಗಳಿದ್ದಂತೆ ಎಂದುಕೊಳ್ಳಿ. ಮಾರ್ಕ್-1 ಇಸ್ರೇಲ್ನಿಂದ ಆಮದು ಮಾಡಿಕೊಂಡ ಇಎಲ್/ಎಂ-2032 ರೇಡಾರ್ ಬಳಸುತ್ತದೆ. ಆದರೆ ಮಾರ್ಕ್-2 ಡಿಆರ್ಡಿಒ ದೇಶೀಯವಾಗಿ ನಿರ್ಮಿಸಿರುವ ಉತ್ತಮ್ ಎಇಎಸ್ಎ ರೇಡಾರ್ ಜೊತೆ ಹಾರಾಟ ನಡೆಸಲಿದೆ. ಎಇಎಸ್ಎ ಎನ್ನುವುದು ಆಕ್ಟಿವ್ ಇಲೆಕ್ಟಾçನಿಕಲಿ ಸ್ಕಾ÷್ಯನ್ಡ್ ಅರೇ ಎನ್ನುವುದರ ಹೃಸ್ವರೂಪವಾಗಿದೆ. ಸರಳವಾಗಿ ಹೇಳುವುದಾದರೆ, ಈ ರೇಡಾರ್ ತನ್ನ ಸುತ್ತಮುತ್ತ ನೋಡಲು ಭೌತಿಕವಾಗಿ ತಿರುಗುವ ಅಗತ್ಯವಿಲ್ಲ. ಇದು ಏಕಕಾಲದಲ್ಲೇ ಹಲವು ಕಡೆಗಳಿಂದ ಬರುವ ವಿಮಾನಗಳನ್ನು ಗಮನಿಸಬಲ್ಲದು. ಡಿಆರ್ಡಿಒ ದಾಖಲೆಗಳ ಪ್ರಕಾರ, ಈ ರೇಡಾರ್ 100 ಕಿಲೋಮೀಟರ್ಗೂ ಹೆಚ್ಚು ದೂರದಲ್ಲಿರುವ ವೈಮಾನಿಕ ಗುರಿಗಳನ್ನು ಗುರುತಿಸಬಲ್ಲದು. ಇದು ಚೀನಾದ ಜೆಎಫ್-17 ವಿಮಾನಕ್ಕೆ ಅಳವಡಿಸಿರುವ ಕೆಎಲ್ಜೆ-7ಎ ಮಣಿಸಬಲ್ಲದು.
ಇನ್ನು ಭಾರತೀಯ ರೇಡಾರ್ ಇನ್ನೊಂದು ಅನುಕೂಲತೆಯನ್ನು ಹೊಂದಿದ್ದು, ಅದನ್ನು ಬಹಳಷ್ಟು ಜನರು ಗಮನಿಸದೇ ಹೋಗುತ್ತಾರೆ. ಇದನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸುವುದರಿಂದ, ನಮ್ಮ ವಾಯುಪಡೆ ಅದರ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ಗಳನ್ನು ತನಗೆ ಬೇಕಾದಾಗ ಇನ್ನಷ್ಟು ಸುಧಾರಿಸಬಹುದು. ಇದಕ್ಕಾಗಿ ಬೇರೆ ಯಾವುದೇ ದೇಶದ ಅನುಮತಿ ಪಡೆಯುವುದಾಗಲಿ, ವಿದೇಶೀ ಪೂರೈಕೆದಾರರಿಗೆ ಅಪಾರ ಹಣ ತೆರುವುದಾಗಲಿ ಬೇಕಿಲ್ಲ. ಈ ಸ್ವಾತಂತ್ರ÷್ಯ ರೇಡಾರ್ ಹೊಂದಿರುವ ವ್ಯಾಪ್ತಿಯಷ್ಟೇ ಮಹತ್ವ ಹೊಂದಿದೆ.
ಇನ್ನು ಆಯುಧಗಳ ವಿಚಾರಕ್ಕೆ ಬಂದರೆ, ಮಾರ್ಕ್-2 ಇಸ್ರೇಲ್ ನಿರ್ಮಾಣದ ಡರ್ಬಿ ಕ್ಷಿಪಣಿಯನ್ನು ಹೊಂದಲಿದೆ. ಇದನ್ನು ಈಗಾಗಲೇ ಮಾರ್ಕ್-1 ವಿಮಾನದಲ್ಲಿ ಬಿಯಾಂಡ್ ವಿಶುವಲ್ ರೇಂಜ್ ಕದನಕ್ಕೆ (ಪೈಲಟ್ ತನ್ನ ಕಣ್ಣುಗಳಿಂದ ಕಾಣಲು ಸಾಧ್ಯವಿಲ್ಲದ ಗುರಿಗಳ ಮೇಲೆ ದಾಳಿ ನಡೆಸುವ ಕ್ಷಿಪಣಿಗಳು) ಬಳಸಲು ಅನುಮೋದನೆ ನೀಡಲಾಗಿದೆ. ಇದರೊಡನೆ, ಭಾರತೀಯ ನಿರ್ಮಾಣದ ಅಸ್ತç ಕ್ಷಿಪಣಿಯೂ ಸೇರಿದ್ದು, ಇದು 160 ಕಿಲೋಮೀಟರ್ಗೂ ಹೆಚ್ಚು ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ನೆಲದ ಮೇಲಿರುವ ಗುರಿಗಳ ಮೇಲೆ ದಾಳಿ ನಡೆಸುವ ಸಲುವಾಗಿ, ವಿಮಾನ ಫ್ರೆಂಚ್ ?ಹ್ಯಾಮರ್? ಕ್ಷಿಪಣಿಯನ್ನು ಹೊಂದಲಿದೆ. ಇದು ಒಂದು ಸ್ಮಾರ್ಟ್ ಬಾಂಬ್ ಕಿಟ್ ಆಗಿದ್ದು, ಜಿಪಿಎಸ್, ಲೇಸರ್, ಅಥವಾ ಇನ್ಫ್ರಾರೆಡ್ ವ್ಯವಸ್ಥೆಯನ್ನು ಬಳಸಿಕೊಂಡು 70 ಕಿಲೋಮೀಟರ್ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು. ಆದರೆ, ನೈಜ ಸಾಮರ್ಥ್ಯ ಇರುವುದು ಬ್ರಹ್ಮೋಸ್ ಎನ್ಜಿ ಕ್ಷಿಪಣಿಯಲ್ಲಿ. ಇದು ಪ್ರಸಿದ್ಧ ಬ್ರಹ್ಮೋಸ್ ಕ್ಷಿಪಣಿಯ ಲಘು ಆವೃತ್ತಿಯಾಗಿದ್ದು, ತೇಜಸ್ ವಿಮಾನದ ಕೆಳಗೆ ಅಳವಡಿಸಬಲ್ಲಷ್ಟು ಸಣ್ಣ ಗಾತ್ರದ್ದಾಗಿದೆ. ಭಾರತದ ಅತ್ಯಂತ ಘಾತಕ ಕ್ಷಿಪಣಿಯನ್ನು ಭಾರತೀಯ ನಿರ್ಮಾಣದ ಯುದ್ಧ ವಿಮಾನದಲ್ಲಿ ಅಳವಡಿಸುವುದು ವಾಯುಪಡೆ ದಾಳಿಯನ್ನು ಯೋಜಿಸುವ ವಿಧಾನವನ್ನೇ ಬದಲಿಸಲಿದೆ.
ಭಾರತಕ್ಕೆ ಎಷ್ಟು ವಿಮಾನಗಳು ಲಭಿಸಲಿವೆ? ಭಾರತೀಯ ವಾಯುಪಡೆ ಈಗಾಗಲೇ 83 ತೇಜಸ್ ಮಾರ್ಕ್-1ಎ ಮತ್ತು 108 ತೇಜಸ್ ಮಾರ್ಕ್-2 ವಿಮಾನಗಳು ಸೇರಿದಂತೆ, 191 ಯುದ್ಧ ವಿಮಾನಗಳಿಗಾಗಿ ಎಚ್ಎಎಲ್ಗೆ ಆದೇಶ ಸಲ್ಲಿಸಿದೆ. ಮೇಲ್ನೋಟಕ್ಕೆ ಇದೊಂದು ಆಕರ್ಷಕ ಸಂಖ್ಯೆಯೇ ಸರಿ. ಆದರೆ, ಭಾರತದ ಮುಂದಿರುವ ಚಿಂತೆ ಉತ್ಪಾದನಾ ವೇಗದ್ದು. ಎಚ್ಎಎಲ್ ಈಗ ವರ್ಷಕ್ಕೆ ಕೇವಲ ಎಂಟರಿAದ ಹತ್ತು ವಿಮಾನಗಳನ್ನು ಮಾತ್ರವೇ ಉತ್ಪಾದಿಸುತ್ತದೆ. ಈ ಪ್ರಮಾಣದಲ್ಲಿ ಉತ್ಪಾದನೆ ನಡೆದರೆ, ಇಷ್ಟು ವಿಮಾನಗಳ ನಿರ್ಮಾಣಕ್ಕೆ 16ರಿಂದ 18 ವರ್ಷಗಳೇ ಹಿಡಿಯಬಹುದು. ಈಗಾಗಲೇ ಹಳೆಯದಾಗಿರುವ ವಿಮಾನ ಸ್ಕಾ÷್ವಡ್ರನ್ಗಳು ಅಷ್ಟು ಕಾಲ ಕಾದಿರಲು ಸಾಧ್ಯವಿಲ್ಲ.
ಆದರೆ, ಗಮನಾರ್ಹ ಅಂಶವೆAದರೆ ಎಚ್ಎಎಲ್ ಈಗ ಮುಂದಕ್ಕೆ ಸಾಗಿದೆ. ಬಹುತೇಕ 4,000 ನೂತನ ಇಂಜಿನಿಯರ್ಗಳ ನೇಮಕಾತಿ ನಡೆಸಲಾಗಿದೆ, ಸಂಯುಕ್ತ ಉತ್ಪಾದನಾ ಘಟಕಗಳನ್ನು ವಿಸ್ತರಿಸಲಾಗಿದೆ, ಮತ್ತು ಟಾಟಾ ಅಡ್ವಾನ್ಸ್÷್ಡ ಸಿಸ್ಟಮ್ಸ್, ಎಲ್&ಟಿ ಮತ್ತು ಭಾರತ್ ಫೋರ್ಜ್ನಂತಹ ಖಾಸಗಿ ಪಾಲುದಾರ ಸಂಸ್ಥೆಗಳನ್ನು ಪೂರೈಕೆ ಸರಪಳಿಯ ಒಳಗೆ ಸೇರಿಸಿಕೊಳ್ಳಲಾಗಿದೆ. ಇಷ್ಟಾದರೂ, ಬೆಂಗಳೂರು ಮತ್ತು ನಾಶಿಕ್ಗಳಲ್ಲಿನ ಅಂತಿಮ ಜೋಡಣಾ ವ್ಯವಸ್ಥೆಗಳು ಇನ್ನಷ್ಟು ವೇಗ ಪಡೆಯಬೇಕು. ಎಚ್ಎಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರವಿ ಕೋಟ ಅವರ ನೇತೃತ್ವದಲ್ಲಿ ಸಂಸ್ಥೆಯ ಮುಂದೆ ದುಪ್ಪಟ್ಟು ಗುರಿಗಳಿವೆ. ಎಚ್ಎಎಲ್ ಮಾರ್ಕ್-1ಎ ಮತ್ತು ಮಾರ್ಕ್-2 ಯುದ್ಧ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು, ಇದೇ ವೇಳೆ ವಿನ್ಯಾಸ, ಉತ್ಪಾದನೆ, ಗುಣಮಟ್ಟ ಮತ್ತು ನೂರಾರು ಪೂರೈಕೆದಾರರು ಸಮರ್ಪಕವಾಗಿ ಕಾರ್ಯಾಚರಿಸುವಂತೆ ಖಾತ್ರಿಪಡಿಸಬೇಕು.
ಜೆಎಫ್-17 ಬ್ಲಾಕ್-3ಗೆ ಹೋಲಿಸಿದರೆ, ನಮ್ಮ ಯುದ್ಧ ವಿಮಾನ ಸಾಕಷ್ಟು ಸ್ಪಷ್ಟ ಮೇಲುಗೈ ಹೊಂದಿದೆ. ಚೀನಾದ ಡಬ್ಲು÷್ಯಎಸ್-13ಗೆ ಹೋಲಿಸಿದರೆ, ಜಿಇ-414 ಹೆಚ್ಚು ನಂಬಿಕಾರ್ಹ ಮತ್ತು ಶಕ್ತಿಶಾಲಿ ಇಂಜಿನ್ ಆಗಿದೆ. ಉತ್ತಮ್ ರೇಡಾರ್ ಭಾರತದ ನಿಯಂತ್ರಣದಲ್ಲೇ ಇರಲಿದೆ. ಇನ್ನು ವಿಮಾನದ ದೇಹ ಹೆಚ್ಚಿನ ಪ್ರಮಾಣದಲ್ಲಿ ಸಂಯುಕ್ತ ಉಪಕರಣಗಳನ್ನು ಹೊಂದಿದ್ದು, ಇದು ವಿಮಾನವನ್ನು ಹೆಚ್ಚು ಹಗುರ ಮತ್ತು ಗಟ್ಟಿಯಾಗಿಸುತ್ತದೆ. ಭಾರತದ ಸ್ವಂತ ಕಾವೇರಿ ಇಂಜಿನ್ ಸಮರ್ಥ ಆಫ್ಟರ್ಬರ್ನರ್ ಹೊಂದುವ ತನಕ, ಜಿಇ-414 ನಮಗೆ ಸುರಕ್ಷಿತವಾದ, ಸಾಮರ್ಥ್ಯ ಸಾಬೀತುಪಡಿಸಿರುವ ಆಯ್ಕೆಯಾಗಿದೆ. ಕಾವೇರಿ ಇಂಜಿನ್ ಕುರಿತ ಕೆಲಸ ಮೌನವಾಗಿಯೇ ಮುಂದುವರಿದಿದ್ದು, ಆ ನಿಟ್ಟಿನಲ್ಲಿನ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ ಮತ್ತು ಎಎಂಸಿಎ ಮಾರ್ಕ್-2 ಯೋಜನೆಗಳಿಗೆ ಪ್ರಯೋಜನ ಒದಗಿಸಲಿದೆ.
ಬಾಕಿ ಉಳಿದಿರುವ ವಿಚಾರಗಳ ಕುರಿತೂ ನಾವು ಪ್ರಾಮಾಣಿಕವಾಗಿ ಚರ್ಚಿಸಬೇಕು. ಮಾರ್ಕ್-2 ಇನ್ನೂ ಹಾರಾಟ ನಡೆಸುತ್ತಿಲ್ಲ, ಮತ್ತು ಜಿಇ ಜೊತೆಗೆ ಬೆಲೆ, ತಂತ್ರಜ್ಞಾನ ವರ್ಗಾವಣೆ, ಹಾಗೂ ಸ್ಥಳೀಯ ಉತ್ಪಾದನೆಗಳ ಕುರಿತು ಮಾತುಕತೆ ನಡೆಯುತ್ತಿದ್ದು, ಅದನ್ನು ಜಾಗರೂಕವಾಗಿ ನಿಭಾಯಿಸಬೇಕಿದೆ. ಆದರೆ, ವಿಮಾನದ ವಿನ್ಯಾಸ ಉತ್ತಮ ಮತ್ತು ಆಧುನಿಕವಾಗಿದೆ. ಹೆಚ್ಚಿನ ಸಾಮರ್ಥ್ಯ, ಸೂಕ್ಷ÷್ಮವಾದ ಕಣ್ಣುಗಳು, ಬಲಶಾಲಿ ಆಯುಧಗಳು ಮತ್ತು ಹೆಚ್ಚಿನ ಭಾರತೀಯ ಬಿಡಿಭಾಗಗಳ ಮೂಲಕ ತೇಜಸ್ ಮಾರ್ಕ್-2 ಖಂಡಿತವಾಗಿಯೂ ಭಾರತೀಯ ವಾಯು ಸೇನೆಯ ಬೆನ್ನೆಲುಬಾಗಲು ಸಿದ್ಧವಾಗುತ್ತಿದೆ








