ಜನರಿಗೆ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿ : ಸಚಿವ ಕೃಷ್ಣ ಬೈರೇಗೌಡ ಸೂಚನೆ

ಕೋಲಾರ:

                   ಸರ್ಕಾರವು ಜನರ ಅನುಕೂಲಕ್ಕೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಆದ್ದರಿಂದ ಇಲಾಖೆಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪುವಂತಾಗಬೇಕು. ಕೃಷಿ ಅಭಿಯಾನವನ್ನು ಗ್ರಾಮ ಪಂಚಾಯಿತಿಗಳಲ್ಲಿ ನಡೆಸುವ ಗ್ರಾಮ ಸಭೆಗಳಲ್ಲಿ ಭಿತ್ತಿ ಪತ್ರಗಳು, ಕರಪತ್ರಗಳು, ಡಿಸ್‍ಪ್ಲೇಗಳ ಮೂಲಕ ಕೃಷಿ ಅಭಿಯಾನದಿಂದ ರೈತರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದರು.

                    ಕೃಷಿ ಯಂತ್ರಧಾರೆ, ಕೇಂದ್ರಗಳ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಯಂತ್ರೋಪಕರಣಗಳ ಬಳಕೆಗೆ ಅನುಕೂಲವಾಗುತ್ತದೆ. ಕೃಷಿ ಯಂತ್ರಧಾರೆಯಲ್ಲಿ ಯಂತ್ರಗಳ ಬಳಕೆಗೆ ಅನುಕೂಲವಾಗುತ್ತದೆ. ಕೃಷಿ ಯಂತ್ರಧಾರೆಯಲ್ಲಿ ಯಂತ್ರಗಳ ಬಳಕೆಗೆ ಚಾಲಕರ ಕೊರತೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ಗಮನಹರಿಸಿ ಸರಿಪಡಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿ ರಾಗಿ ಖರೀದಿ ದರವನ್ನು 2800 ರೂ.ಗಳಿಗೆ ನಿಗದಿಪಡಿಸಿದ್ದು, ರಾಗಿಗೆ ಉತ್ತಮ ಬೆಲೆ ಇದೆ. ಜಿಲ್ಲೆಯಲ್ಲಿ ರಾಗಿ ಬೆಳೆಯಲು ಉತ್ತೇಜನ ನೀಡಬೇಕಿದೆ. ರಾಗಿ ಬೆಳೆಯ ಬರವನ್ನು ಸಹ ತಡೆದುಕೊಳ್ಳುವ ಗುಣ ಹೊಂದಿದೆ. ಇದರಿಂದ ರೈತರಿಗೆ ಉತ್ತಮ ಆದಾಯ ಬರುತ್ತದೆ. ಅವಶ್ಯಕತೆ ಬಂದರೆ ಸರ್ಕಾರವು ಸಹ ರಾಗಿಯನ್ನು ಖರೀದಿಸುತ್ತದೆ. ಹನಿ ನೀರಾವರಿಗೆ ಶೇ 90 ರಷ್ಟು ಸಬ್ಸಿಡಿ ಇದ್ದು, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಹನಿ ನೀರಾವರಿ ಹೊರತು ಪಡಿಸಿ ಬೆಳೆಯನ್ನು ಬೆಳೆಯಬಾರದು ಎಂದು ಮಾಹಿತಿ ನೀಡಬೇಕು. ಪಶುಭಾಗ್ಯ ಯೋಜನೆಯಲ್ಲಿ ಪ್ರೋತ್ಸಾಹ ಧನ, ಮೇವು ಕಿಟ್‍ಗಳ ವಿತರಣೆಯನ್ನು ಸಮರ್ಪಕವಾಗಿ ಸಕಾಲದಲ್ಲಿ ಮಾಡಬೇಕು ಎಂದು ಪಶು ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

                        ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಹಾಗೂ ಇಂಗ್ಲೀಷ್ ಶಿಕ್ಷಣ ತಂದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬಹುದಾಗಿದೆ. ಜಿಲ್ಲೆಯಲ್ಲಿ 1 ಮಗು ಇರುವ 6 ಶಾಲೆಗಳಿದ್ದು, ಪೋಷಕರ ಮನವೊಲಿಸಿ ಪಕ್ಕದ ಶಾಲೆಗೆ ಸೇರಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ ಅವರು ಪೋಷಕರಲ್ಲಿ ಇಂಗ್ಲೀಷ್ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತಿರುವುದರಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದ ಅವರು ಕೃಷಿ, ತೋಟಗಾರಿಕೆ, ಪಶುಪಾಲನಾ, ರೇಷ್ಮೆ ಇಲಾಖೆಗಳು ಜನರ ಬಳಿ ಹೋಗಿ ಕೆಲಸ ಮಾಡುವಂತಹವಾಗಿದ್ದು, ಜನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.

Recent Articles

spot_img

Related Stories

Share via
Copy link