ಕಳಪೆ ಕಾಮಗಾರಿ

ಬ್ಯಾಡಗಿ:

         ನರೇಗಾ ಯೋಜನೆಯಡಿ ಪಂಚಾಯತ್‍ರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗಿದ್ದ ಚೆಕ್‍ಡ್ಯಾಂ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಪಟ್ಟ ಇಂಜನೀಯರ ಇದರ ಬಗ್ಗೆ ನಿರ್ಲಕ್ಷ ವಹಿಸಿದ್ದು, ಸರಕಾರಕ್ಕೆ ಲಕ್ಷಾಂತರ ರೂ.ಗಳ ದುರುಪಯೋಗವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಸಭೆಗೆ ಅವರನ್ನು ಕರೆಸುವಂತೆ ಆಗ್ರಹಿಸಿ ಪಟ್ಟು ಹಿಡಿದ ಕಾರಣ ಸಭೆ ಮುಂದೂಡಿದ ಘಟನೆ ಜರುಗಿತು.

         ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಗುಂಡಯ್ಯ ಬ್ರಹ್ಮಯ್ಯ ದೇವಸ್ಥಾನದಲ್ಲಿ ನಡೆದ ಪ್ರಸಕ್ತ ಸಾಲಿನ ನರೇಗಾ ಯೋಜನೆಯ ಗ್ರಾಮ ಸಭೆಯಲ್ಲಿ ಚೆಕ್ ಡ್ಯಾಂ ಕಾಮಗಾರಿಯ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆಯ ಇಂಜನೀಯರರನ್ನು ಕರೆಸುವಂತೆ ಗ್ರಾಮಸ್ಥರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗೆ ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿವೃದ್ಧಿ ಅಧಿಕಾರಿ ರೆಹಮತ್‍ಬಿ ಸಭೆಗೆ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಪಂಚಾಯತ್‍ರಾಜ್ ಇಲಾಖೆಯವರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ವಹಿಸಿರುವ ಚೆಕ್‍ಡ್ಯಾಂ ಕಾಮಗಾರಿಯು ಕಳಪೆಯಾಗಿರುವ ಕುರಿತು ಗ್ರಾಮಸ್ಥರ ಆರೋಪವಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಅವರು ಖುದ್ದಾಗಿ ಹಾಜರರಿಬೇಕಿತ್ತು, ಆದರೇ ಸಂಬಂಧಪಟ್ಟ ಇಂಜನೀಯರ ವರ್ಗಾವಣೆಯಾದ ಕಾರಣ ಸಭೆಗೆ ಗೈರು ಹಾಜರಿ ಕಂಡು ಬಂದಿದೆ, ಈ ಬಗ್ಗೆ ಅವರ ಮೇಲಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿ ಕ್ರಮ ಕೈಕೊಳ್ಳುವುದಾಗಿ ಸಭೆಗೆ ತಿಳಿಸುತ್ತಾ ಸಭೆ ನಡೆಯಲು ಅವಕಾಶ ಮಾಡಿಕೊಡುವಂತೆ ಕೋರಿದರು.

          ಇದಕ್ಕೆ ಒಪ್ಪದ ಗ್ರಾಮಸ್ಥರು ಪಂಚಾಯತ ರಾಜ ಇಲಾಖೆಯಿಂದ ಗ್ರಾಮದಲ್ಲಿ ನಡೆದಿರುವ 8.15 ಲಕ್ಷ ರೂ.ಗಳ ಚೆಕ್‍ಡ್ಯಾಂ ಕಾಮಗಾರಿಯು ಕಳಪೆಯಾಗಲು ಇಲಾಖೆಯವರು ನೇರ ಹೊಣೆಗಾರರಾಗಿದ್ದು, ಅವರು ಸಭೆಗೆ ಹಾಜರಾದರಷ್ಟೇ ಸಭೆ ನಡೆಸಲು ಅವಕಾಶ ಮಾಡಿಕೊಡುವುದಾಗಿ ಇಲ್ಲದೇ ಹೋದರೇ ಸಭೆಯನ್ನು ನಡೆಸುವಂತಿಲ್ಲವೆಂದು ತಾಕೀತು ಮಾಡಿ ಸಭೆಯಿಂದ ಸಾರ್ವಜನಿಕರು ಹೊರ ನಡೆದರು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸರೋಜಾ ಬೇವಿನಮರದ, ಉಪಾಧ್ಯಕ್ಷ ರವಿ ಹೊಸಮನಿ, ಸದಸ್ಯ ದ್ಯಾವಣ್ಣ ಭರಡಿ, ಬಸವರಾಜ ಹೊಸಮನಿ, ಗುಂಡಣ್ಣ ಹೊಸಮನಿ, ವೀರನಗೌಡ ಬೇವಿನಮರದ, ತೋಟಗಾರಿಕೆ ಇಲಾಖೆಯ ಅಧಿಕಾರಿ ಹೊಟ್ಟೆಪ್ಪನವರ ಸೇರಿದಂತೆ ಇತರರಿದ್ದರು.

Recent Articles

spot_img

Related Stories

Share via
Copy link