ತುರುವೇಕೆರೆ:
ಕೊಡಗು ಜಿಲ್ಲೆಯಲ್ಲಿ ಆದ ಅನಾಹುತದಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ನಮ್ಮ ತಾಲೂಕಿನ ಮುಸ್ಲಿಂ ಭಾಂಧವರು ಸಹಾಯ ಹಸ್ತ ಚಾಚಿದ್ದಾರೆ. ಪಟ್ಟಣದ ಮುಸ್ಲಿಂ ಯುವಕರು ಪಟ್ಟಣದಲ್ಲಿರುವ ತಮ್ಮ ಸಮುದಾಯದ ಅಂಗಡಿ, ಮನೆಗಳಿಗೆ ತೆರಳಿ ಹಣ ಸಂಗ್ರಹಣೆ ಮಾಡಿದರು. ಹಾಗೂ ಇತರೆ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಕೊಡಗಿನ ಜನರಿಗೆ ಸಹಕಾರಿಯಾಗಲೆಂದು ಸುಮಾರು ಒಂದು ಲಕ್ಷ ರೂಗಳ ಹೊದಿಕೆಯನ್ನು ನೀಡಲು ಮುಂದಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಕೊಡಗಿನ ಸಂತ್ರಸ್ತರಿಗೆಂದು ಖರೀದಿಸಿದ ಹೊಸ ಹೊದಿಕೆಗಳನ್ನು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಛೇರಿಗೆ ರವಾನಿಸುವ ಸಲುವಾಗಿ ಶೇಖರಿಸಲಾಗಿತ್ತು. ನೊಂದ ಮನಸ್ಸುಗಳಿಗೆ ಧೈರ್ಯ ತುಂಬೋಣ, ನೊಂದವರಿಗೆ ನೆರವಾಗೋಣ, ಮಾನವೀಯತೆ ಮೆರೆಯೋಣ ಎಂಬ ಸಂದೇಶವನ್ನು ಸಾರುತ್ತಾ ಅವರಿಗೆಂದು ತಂದಿದ್ದ ಹೊದಿಕೆಯನ್ನು ತಾವೇ ಕೈಯ್ಯಾರ ಹೊತ್ತು ಮಡಿಕೇರಿಯತ್ತ ಮುಸ್ಲಿಂ ಯುವಕರು ಪ್ರಯಾಣ ಬೆಳೆಸಿದರು.
ಮುಸ್ಲಿಂ ಮುಖಂಡರಾದ ಅಸ್ಲಾಂ ಪಾಷಾ ಮತ್ತು ಸಿರಾಜ್ ಅಹಮದ್ ಸಹಾಯ ಕುರಿತಂತೆ ಮಾತನಾಡಿ ನಾವೆಲ್ಲರೂ ಮನುಷ್ಯರು. ಪ್ರಕೃತಿಯ ಮುಂದೆ ಎಲ್ಲರೂ ಸಮಾನರೆ. ಬೇರೆಯವರ ನೋವಿಗೆ ಸ್ಪಂದಿಸಲು ಜಾತಿ ಭೇಧ ಬೇಕಿಲ್ಲ. ಪ್ರೀತಿ ವಿಶ್ವಾಸಕ್ಕೆ ಜಾತಿ ಧರ್ಮವಿಲ್ಲ. ಎಲ್ಲರಲ್ಲೂ ಮಾನವೀಯತೆಯನ್ನು ಕಾಣುವುದು ನಮ್ಮಗಳ ಮೊದಲ ಆಧ್ಯತೆಯಾಗಬೇಕು. ಹಾಗಾಗಿ ಪಟ್ಟಣದ ಮುಸ್ಲಿಂ ಸಮುದಾಯದ ಯುವಕರು ಕೊಡಗಿನ ಜನರಿಗೆ ನೆರವಾಗಲು ನಾಮುಂದು ತಾ ಮುಂದು ಎಂಬಂತೆ ಸಹಾಯ ಹಸ್ತ ಚಾಚಿದ್ದಾರೆ. ಅತ್ಯಂತ ಕಡುಬಡವರೂ ಸಹ ಸಹಾಯ ಧನ ನೀಡಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನು ನೀಡಿ ಕೊಡಗಿನ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ನಮ್ಮ ಸಮುದಾಯವೂ ಮಾಡುತ್ತಿದೆ ಎಂದು ಹೇಳಿದರು.
ಮುಖಂಡರಾದ ಇಂತಿಯಾಜ್, ನೂರ್ ಅಹಮದ್, ಅಫ್ಜಲ್, ಜಾಫರ್, ಜಾಕಿರ್ ಹುಸೇನ್, ಸಲ್ಮಾನ್, ಜಾಕೀರ್, ಅಲ್ಲಾಭಕ್ಷ್, ಹಮ್ ಜದ್, ಯಾಸೀನ್, ಬಿಲಾಲ್, ಅಸ್ಲಾಂ, ಗೌಸ್, ಇಮ್ರಾನ್ ಖಾನ್, ಮೊಹಮದ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.