ಗುಬ್ಬಿ
ಪ್ರಸಕ್ತ ಸಾಲಿನ ಮುಂಗಾರು ಮಳೆ ಕೈಕೊಟ್ಟಿದ್ದು ತಾಲ್ಲೂಕಿನ ರೈತರು ಜನ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಮುಂಗಾರು ಆರಂಭದಲ್ಲಿ ತಾಲ್ಲೂಕಿನಾದ್ಯಂತ ಉತ್ತಮವಾದ ಮಳೆ ಬಿದ್ದಿದ್ದರಿಂದ ರೈತರು ಒಂದಿಷ್ಟು ಖುಷಿಯಲ್ಲಿದ್ದರು. ಈ ಬಾರಿ ಉತ್ತಮ ಮಳೆ ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿ ಭೂಮಿ ಹದ ಮಾಡುವತ್ತ ಮುಂದಾಗಿದ್ದರು. ಆದರೆ ಆನಂತರದ ದಿನಗಳಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಯಿತು. ಪೂರ್ವ ಮುಂಗಾರು ಹಂಗಾಮಿನ ಬೆಳೆಗಳು ಸಹ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯಲಿಲ್ಲ. ಗೌರಿ ಗಣೇಶ ಹಬ್ಬದ ಹೊತ್ತಿಗೆ ಹೊಲಗಳಲ್ಲಿ ದನಗಳು ಗರಿ ಮೇಯುತ್ತಿದ್ದವು. ಆದರೆ ಈ ಬಾರಿ ಬಹುತೇಕ ಕಡೆಗಳಲ್ಲಿ ಭೂಮಿಗೆ ಬೀಜವನ್ನೆ ಹಾಕಿಲ್ಲ. ಆಗಾಗ ಬೀಳುತ್ತಿದ್ದ ತುಂತುರು ಮಳೆಗೆ ಕೆಲ ರೈತರು ರಾಗಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಬೀಳದೆ ಬಿತ್ತಿದ್ದ ರಾಗಿ ಇತರೆ ಕಾಳುಗಳು ಮೊಳಕೆಯೊಡೆದು ಮೇಲೆ ಬರಲಾರದೆ ಅಲ್ಲೆ ಕೊರಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಆರಂಭದಲ್ಲಿ ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ತಾಲ್ಲೂಕಿನ ರೈತರು ಖುಷಿಯಿಂದಲೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಮಳೆ ಕೈಕೊಟ್ಟಿದ್ದು ರೈತರು ಮಳೆಗಾಗಿ ಮುಗಿಲನ್ನು ನೋಡುವಂತಾಗಿದೆ. ಸದ್ಯದಲ್ಲಿ ಮಳೆ ಬಂದರೆ ಈಗಾಗಲೆ ತುಂತುರು ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳಾದರೂ ರೈತರ ಕೈಗೆ ಸಿಗುತ್ತವೆ, ಇಲ್ಲದಿದ್ದರೆ ಜಾನುವಾರುಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ್ದ ಪೂರ್ವ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು ಮತ್ತು ತೊಗರಿ ಬೆಳೆಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಇಳಿವರಿ ಕಾಣಲು ಸಾಧ್ಯವಾಗಲಿಲ್ಲ. ಇನ್ನು ಮುಂಗಾರು ಹಂಗಾಮಿನ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಭೂಮಿ ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ಬಿತ್ತನೆಗೆ ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಖರೀದಿಸಿಟ್ಟುಕೊಂಡಿದ್ದರು. ಆದರೆ ಮಳೆ ಇಲ್ಲದ ಕಾರಣ ರೈತರ ಸ್ಥಿತಿ ತೀವ್ರತರವಾಗಿದೆ.
ತಾಲ್ಲೂಕಿನ ಸಿ.ಎಸ್.ಪುರ. ಕಡಬ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಆಗಾಗ ಅಲ್ಪ ಸ್ವಲ್ಪ ತುಂತುರು ಮಳೆ ಬಿದ್ದ ಕಾರಣ ಭೂಮಿ ಸಿದ್ದತೆ ಮಾಡಿಕೊಂಡಿದ್ದ ರೈತರು ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಬಿತ್ತಿದ್ದ ಬೀಜಗಳು ಮೊಳಕೆಯೊಡೆಯುವುದರಲ್ಲಿ ಮತ್ತೆ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಮೇಲೆ ಬರಲಾರದಂತಹ ಸ್ಥಿತಿ ಉಂಟಾಗಿದೆ. ಸಿ.ಎಸ್.ಪುರ ಹೋಬಳಿ ಮತ್ತು ಕಡಬ ಹೋಬಳಿ ವ್ಯಾಪ್ತಿಯಲ್ಲಿ ಆಗಾಗ ತುಂತುರು ಮಳೆ ಬಿದ್ದಿದ್ದರಿಂದ ಒಂದಿಷ್ಟು ರೈತರು ಬಿತ್ತನೆ ಮಾಡಿದ್ದ ರಾಗಿ ಮತ್ತು ದ್ವಿದಳ ಧಾನ್ಯಗಳು ಉತ್ತಮವಾಗಿ ಬೆಳೆದಿವೆ. ಆದರೆ ಉಳಿದ ಕಡೆಗಳಲ್ಲಿ ಭೂಮಿಗೆ ಬೀಜವನ್ನು ಬಿತ್ತದೆ ಮಳೆಗಾಗಿ ಪರಿತಪಿಸುತಿರುವ ಸ್ಥಿತಿ ಕಂಡುಬರುತ್ತಿದೆ. ತಾಲ್ಲೂಕಿನ ನಿಟ್ಟೂರು, ಹಾಗಲವಾಡಿ ಮತ್ತು ಚೇಳೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು ರೈತರು ಬಿತ್ತನೆ ಮಾಡದೆ ಮಳೆಗಾಗಿ ಕಾಯುವಂತಹ ಪರಿಸ್ಥಿತಿ ಉಂಟಾಗಿದೆ. ಇದೇ ಪರಿಸ್ಥಿತಿ ನಿರ್ಮಾಣವಾದರೆ ಜಾನುವಾರುಗಳ ಮೇವಿಗೂ ಪರದಾಡುವಂತಹ ಸ್ಥಿತಿ ಉಂಟಾಗಲಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಕೃಷಿ ಇಲಾಖೆ ತಾಲ್ಲೂಕಿನಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದ್ದು ರೈತರು ತಮಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದ್ದು ರೈತರ ಜೀವನಾಡಿಯಾಗಿರುವ ಕೃಷಿ ಬೆಳೆಗಳು ಸೇರಿದಂತೆ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ಮಾವು ಮುಂತಾದ ಬೆಳೆಗಳು ನೀರಿಲ್ಲದೆ ಒಣಗುವ ಹಂತಕ್ಕೆ ತಲುಪಿದ್ದು ಈ ಭಾರಿ ಆರಂಭದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನ ರೈತರಿಗೆ ಹರ್ಷದಾಯಕವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮಳೆ ಕೈಕೊಟ್ಟಿದ್ದರಿಂದ ರೈತರು ಕೃಷಿ ಬೆಳೆಗಳನ್ನು ಬೆಳೆಲಾಗದೆ ತೀವ್ರತರ ಸಮಸ್ಯೆ ಎದುರಿಸುವಂತಾಗಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಿಲ್ಲದೆ ಕೃಷಿ ಬೆಳೆಗಳು ಒಣಗುತ್ತಿರುವುದರ ಜೊತೆಗೆ ತಮ್ಮನ್ನು ಅವಲಂಬಿಸಿರುವ ಜಾನುವಾರುಗಳ ಮೇವಿಗೂ ಪರದಾಡುವಂತಾಗಿದೆ. ಮುಂಗಾರು ಆರಂಭವಾಗಿ ಮೂರು ತಿಂಗಳು ಕಳೆಯುತ್ತಿದ್ದರು ಸಮರ್ಪಕವಾಗಿ ಮಳೆ ಬಾರದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ರೈತರು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದಾರೆ. ತಡವಾಗಿಯಾದರೂ ಮಳೆ ಬಂದರೆ ರೈತರ ಬದುಕು ಹಸನಾಗಲಿದೆ. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಈಗಾಗಲೆ ಕೆಲ ರೈತರು ಅಲ್ಪಸ್ವಲ್ಪ ಬಿದ್ದ ತುಂತುರು ಮಳೆಗೆ ಬಿತ್ತನೆ ಮಾಡಿದ್ದು ಕಷ್ಟಪಟ್ಟು ಸಂಗ್ರಹಿಸಿಟ್ಟುಕೊಂಡಿದ್ದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಭೂಮಿಗೆ ಹಾಕಿ ಕೈಸುಟ್ಟುಕೊಂಡಿದ್ದಾರೆ. ಮಳೆ ಇಲ್ಲದ ಕಾರಣ ಬಿತ್ತನೆ ಮಾಡಿದ್ದ ಬೆಳೆಗಳು ಮೇಲೆ ಬರಲಾರದೆ ಭೂಮಿಯಲ್ಲಿ ಉಳಿಯುವಂತಾಗಿದೆ. ಉತ್ತಮವಾಗಿ ಮಳೆಯಾಗಿದ್ದರೆ ಈವರೆಗೆ ತಾಲ್ಲೂಕಿನದ್ಯಂತ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಿತ್ತು. ಆದರೆ ಸಿ.ಎಸ್.ಪುರ. ಕಡಬ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶೇ.30 ರಿಂದ 50 ರಷ್ಟು ರಾಗಿ ಬಿತ್ತನೆಯಾಗಿದೆ. ಸದ್ಯದಲ್ಲಿ ಮಳೆಬಂದರೆ ಬಿತ್ತನೆಯಾಗಿರುವ ಬೆಳೆ ಸ್ವಲ್ಪ ಮಟ್ಟಿಗೆ ರೈತರ ಕೈಗೆ ಸಿಗಲಿದೆ ಇಲ್ಲದಿದ್ದರೆ ಹಾಗೆ ಒಣಗಿಹೋಗುವ ಪರಿಸ್ಥಿತಿ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








