ದಾವಣಗೆರೆ:
ಕೇಂದ್ರ ಸರ್ಕಾರದ ಇತರೆ ನಿವೃತ್ತ ನೌಕರರಿಗೆ ನೀಡುವಂತೆ, ನಿವೃತ್ತ ಬ್ಯಾಂಕ್ ನೌಕರರಿಗೂ ಸರ್ಕಾರ ಪಿಂಚಣಿ ನೀಡಬೇಕೆಂದು ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಧ್ಯಕ್ಷ ಬಿ. ದೇವದಾಸರಾವ್ ಆಗ್ರಹಿಸಿದರು.
ಇಲ್ಲಿನ ವಿದ್ಯಾನಗರದಲ್ಲಿರುವ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಭಾನುವಾರ ದಾವಣಗೆರೆ-ಚಿತ್ರದುರ್ಗ ಜಿಲ್ಲಾ ನಿವೃತ್ತರ ಒಕ್ಕೂಟದ ವತಿಯಿಂದ ದಿ. ಇಂದಿರಮ್ಮ ರಾಮಕೃಷ್ಣ ಅಡಿಗ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ಬ್ಯಾಂಕ್ ನಿವೃತ್ತರ ಸ್ನೇಹಿ ವಿಳಾಸ ಕೈಪಿಡಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಇತರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನೌಕರರಿಗೆ ಕೇಂದ್ರ ಸರ್ಕಾರ ಪಿಂಚಣಿ ನೀಡುತ್ತಿದೆ. ಆದರೆ, ಬ್ಯಾಂಕ್ ನೌಕರರೂ ಸಹ ಅವರಷ್ಟೇ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೂ ಪಿಂಚಣಿ ನೀಡದೇ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ನಮ್ಮ ಬೇಡಿಕೆಗಳಿಗೆ ಈಡೇರಲು ಎಲ್ಲಾ ಬ್ಯಾಂಕ್‍ಗಳ ನೌಕರರು ಒಂದೇ ಒಕ್ಕೂಟದ ಅಡಿಯಲ್ಲಿ ಸಂಘಟಿತರಾಗಿ ಹೋರಾಟ ರೂಪಿಸಿ ಸರ್ಕಾರಕ್ಕೆ ಒತ್ತಡ ಹಾಕಬೇಕಿದರೆ, ನಮ್ಮ ಬೇಡಿಕೆ ಈಡೇರಲಿದೆ. ಆದ್ದರಿಂದ ಎಲ್ಲರೂ ಒಂದೇ ಒಕ್ಕೂಟದಲ್ಲಿ ಬರುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ನಿವೃತ್ತ ಬ್ಯಾಂಕ್ ಅಧಿಕಾರಿಗಳು ಸಮಾಜದಲ್ಲಿನ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವು ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ನಿವೃತ್ತರ ಒಕ್ಕೂಟವು ಗ್ರಾಮಾಂತರ ಪ್ರದೇಶದ ಸುಮಾರು 12 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ತಲಾ 6 ಸಾವಿರ ರೂ. ನಗದು ಪುರಸ್ಕಾರ ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು. ಅಬ್ದುಲ್ ಅಜೀಜ್ ಮಾತನಾಡಿ, ನಿವೃತ್ತ ಬ್ಯಾಂಕ್ ನೌಕರರ ಸಮಸ್ಯೆಗಳು ಸಾಕಷ್ಟಿವೆ. ಅವುಗಳ ಪರಿಹರಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಧ್ಯಕ್ಷ ಎನ್.ಟಿ. ಹೆಗ್ಡೆ ಅವರು ಬ್ಯಾಂಕ್ ನಿವೃತ್ತರ ಸ್ನೇಹಿ ವಿಳಾಸ ಕೈಪಿಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾರ್ಪ್ರೋರೇಶನ್ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಧ್ಯಕ್ಷ ಕೆ. ರಾಮಪ್ರಿಯ, ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಮಹಿಳಾ ಘಟಕದ ಸಂಚಾಲಕಿ ಉಮಾ ವಿ. ಕುಮಾರ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ದಾವಣಗೆರೆ-ಚಿತ್ರದುರ್ಗ ಜಿಲ್ಲಾ ನಿವೃತ್ತರ ಒಕ್ಕೂಟದ ಅಧ್ಯಕ್ಷ ವಿ. ನಂಜುಂಡೇಶ್ವರ, ಪ್ರಧಾನ ಕಾರ್ಯದರ್ಶಿ ಜಿ. ರಂಗಸ್ವಾಮಿ, ಖಜಾಂಚಿ ಜಿ.ಬಿ. ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.