ಬೆಂಗಳೂರು:
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕಾನೂನು ಹೋರಾಟ ನಡೆಸುವ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ, ರಾಜ್ಯದ ಹಿತ ಕಾಪಾಡುವುದು ಮುಖ್ಯ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಜತೆ ಈ ಸಂಬಂಧ ಚರ್ಚೆ ನಡೆಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಸರ್ಕಾರ ಹಸಿರುಪೀಠದ ಮುಂದೆ ಹೋಗಲು ನಿರ್ಧರಿಸಿದೆ. ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ರಾಜ್ಯದ ಪಾಲಿನ ನೀರು ಪಡೆಯಲು ವಿಘ್ನವುಂಟು ಮಾಡುವ ಪ್ರಯತ್ನದಲ್ಲಿ ಗೋವಾ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು.
ಮಹದಾಯಿ ವಿಚಾರದಲ್ಲಿ ಗೋವಾ ರಾಜ್ಯದವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮತೆ ರಾಜ್ಯದ ಹಿತ ಕಾಪಾಡುವುದು ನಮಗೆ ಮುಖ್ಯವಾಗಿದೆ. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೆ ಸಿದ್ಧ. ಸೂಕ್ತ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ ಎಂದರು.
ರಾಜ್ಯದ ಜಲದ ವಿಚಾರದಲ್ಲಿ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ. ಎಲ್ಲಾ ಪಕ್ಷದ ಮುಖಂಡರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರಕ್ಕೆ ಬೆಂಬಲ ನೀಡಬೇಕು. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಹೈಕಮಾಂಡ್‍ನಿಂದ ಬುಲಾವ್ ಬಂದಿದೆಯೇ ಎಂಬ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ