ಕೂಡ್ಲಿಗಿ:
ನಾವು ಎನಾನ್ನದ್ದರೂ ಸಾಧಿಸಬೇಕಿದ್ದರೆ ನಮ್ಮ ಗುರಿ ಸ್ಪಷ್ಟವಾಗಿರಬೇಕು ಹಾಗೂ ನಮ್ಮ ಕನಸು ದೊಡ್ಡದಾಗಿರಬೇಕು ಎಂದು ಹೊಸಪೇಟೆಯ ವಿಜಯನಗರ ಪದವಿ ಕಾಲೇಜಿನ ಉಪನ್ಯಾಸಕ ಡಾ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ಹೇಳಿದರು. ಅವರು ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಪಿಯುಸಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ, ಪಠೇತರ ಮತ್ತು ಎನ್‍ಎಸ್‍ಎಸ್ ದೈನಂದಿನ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಒಳ್ಳೆಯ ಪರಿಸರ ಹಾಗೂ ಸೂಕ್ತ ಮಾರ್ಗದರ್ಶನ ಮುಖ್ಯವಾಗಿರುತ್ತದೆ. ಆದರೆ ಇಂದಿನ ವಿದ್ಯಾರ್ಥಿಗಳು ಯಾರೋ ಬರೆದ ಗೈಡ್ ಮತ್ತು ನೋಟ್ಸ್‍ಗಳ ಮೊರೆ ಹೋಗುತ್ತಿದ್ದಾರೆ. ಗುರುವಿಗೆ ಯೋಗ್ಯ ಶಿಷ್ಯನಾದಾಗ ಮಾತ್ರ ಒಳ್ಳೆ ಜ್ಞಾನ ಸಿಗುತ್ತದೆ. ವಿದ್ಯಾರ್ಥಿಗಳು ತಾಳ್ಮೆ ಗುಣ ಬೆಳಿಸಿಕೊಳ್ಳಬೇಕು. ತಂದೆ ತಾಯಿಗಳನ್ನು ಆದರ್ಶ ವ್ಯಕ್ತಿಗಳಾಗಿ ಸ್ವೀಕಾರ ಮಾಡಬೇಕು. ವಿದ್ಯಾರ್ಥಿಗಳು ಮಾಡಿದ ಸಣ್ಣ ತಪ್ಪಿಗೂ ನೇರವಾಗಿ ಶಿಕ್ಷಕರನ್ನೇ ಹೊಣೆ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ವಿದ್ಯಾರ್ಥಿಗಳು ಸಮಾಜದ ಒಳ್ಳೆ ಕೆಲಸಗಳನ್ನು ಮಾಡುತ್ತ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಬಸವರಾಜ ಗೌಡ್ರು, ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ ಹೊಂದಿರುವ ಕೂಡ್ಲಿಗಿ ದೇಶದಲ್ಲಿ ಶ್ರೇಷ್ಟ ಪಟ್ಟಣವಾಗಿದ್ದು, ಕಲೆ, ಸಂಸ್ಕೃತಿಯ ನೆಲೆ ಬೀಡಾಗಿದೆ. ಏನೂ ಇಲ್ಲ ಎನ್ನುವ ಕೊರತೆಯ ಮಧ್ಯಯೇ ನಮ್ಮ ಕಾಲೇಜು ಎಲ್ಲವನ್ನು ಸಾಧಿಸಿ ತೋರಿಸುತ್ತಿದೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಾಚಾರ್ಯ ಬಿ.ಆರ್. ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್‍ಎಸ್‍ಎಸ್ ಅಧಿಕಾರಿ ಜಗದೀಶ್ ಚಂದ್ರ ಬೋಸ್, ಉಪನ್ಯಾಸಕರಾದ ಸಕ್ರಪ್ಪ ರೆಡ್ಡಿ, ಶ್ರೀನಿವಾಸ, ಎಸ್. ಕೊಟ್ರೇಶ್, ಎನ್. ಸುಮಾ, ಸಿಎಂಸಿ ಸದಸ್ಯ ಎನ್.ಎಸ್.ಸೋಮಶೇಖರ ಸೇರಿದಂತೆ ಕಾಲೇಜಿನ ಉಪಾನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಹೂ ಗುಚ್ಚ ಹಾಗೂ ನೆನೆಪಿನ ಕಾಣಿಕೆಗಳನ್ನು ಕೊಡುವ ಮೂಲಕ ಸ್ವಾಗತ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ