ಹುಳಿಯಾರು
ಭಾರತದ ಸಾಹಿತ್ಯ ಲೋಕದಲ್ಲಿ ಕನ್ನಡ ಸಾಹಿತ್ಯ ತನ್ನದೇ ಆದ ಛಾಪು ಮೂಡಿಸಿದ್ದು ಕನ್ನಡ ಭಾಷೆಯಲ್ಲಿ ಅತ್ಯದ್ಭುತವಾದ ಪುಸ್ತಕಗಳಿದ್ದು ಇವುಗಳ ಓದಿನಿಂದ ನಮ್ಮ ಅರಿವು ವಿಸ್ತಾರವಾಗುತ್ತದೆ. ಅದಕ್ಕೂ ಮೀರಿ ನಮಗೆ ತಿಳಿಯದ ವಿಚಾರಗಳ ಬಗ್ಗೆ ವಿಜ್ಞಾನ ಹೆಚ್ಚುತ್ತದೆ ಎಂದು ಕವಿ ಆದ ಬಿ.ಎಸ್.ರಾಧಾಕಷ್ಣ ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಣಜಾಣೆಯರ ಬಳಗದ ಉದ್ಘಾಟನೆ ಹಾಗೂ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಓದು ಪುಸ್ತಕದ ಬಗ್ಗೆ ಅಭಿರುಚಿ ಹುಟ್ಟಿಸುತ್ತದೆ. ಪುಸ್ತಕವನ್ನು ನಾನಾ ಆಯಾಮಗಳಿಂದ ಓದುತ್ತಾ ಹೋದಲ್ಲಿ ನಮ್ಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಓದುವ ಪುಸ್ತಕಗಳೇ ಬೇರೆ, ಕಾಡುವ ಪುಸ್ತಕಗಳೇ ಬೇರೆ. ಕೆಲವೊಂದು ಪುಸ್ತಕಗಳ ಪಾತ್ರಧಾರಿಗಳು ಎಷ್ಟೋ ವರ್ಷಗಳವರೆಗೆ ನಮ್ಮನ್ನು ಕಾಡುತ್ತಲೇ ಇರುತ್ತವೆ ಎಂದರು.
ನಮ್ಮ ಆಂತರ್ಯ, ಆಶಯಕ್ಕೆ ಸಂಬಂಧಿಸಿದ ತಲ್ಲಣಗಳಿಗೆ ಉತ್ತರ ಸಿಕ್ಕಿದೆ ಎಂದು ಗೊತ್ತಾದರೆ ಆ ಪುಸ್ತಕಗಳು ನಮ್ಮನ್ನು ಕಾಡುತ್ತವೆ. ಮನದಾಳದ ತುಡಿತಗಳಿಗೆ ಯಾವ ಪುಸ್ತಕದಲ್ಲಿ ಉತ್ತರ ಸಿಕ್ಕುತ್ತದೋ ಆ ಪುಸ್ತಕ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ ಎಂದರು. ಸಾಕಷ್ಟು ಪುಸ್ತಕಗಳು ಮೂಲ ಕತೆಯಲ್ಲಿ ಚೆನ್ನಾಗಿದ್ದು ನಾಟಕ, ಸಿನಿಮಾ ಮಾಡುವ ಸಂದರ್ಭದಲ್ಲಿ ಸೋತಿದ್ದಾರೆ.ಪುಸ್ತಕಗಳಲ್ಲಿ ಸೆಳೆಯುವ ಘಟನೆಗಳನ್ನು ಚಿತ್ರರೂಪಕ್ಕೆ ಇಳಿಸುವುದರಲ್ಲಿ ಪುಸ್ತಕದಲ್ಲಿನ ಪಾತ್ರಗಳ ಸಂಕೀರ್ಣತೆಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಲಿ, ಮೋಹನ್ ಕುಮಾರ್, ಡಾ.ಸುಷ್ಮಾ, ವಿನುತಾಶ್ರೀ, ಜಾಣ ಜಾಣೆಯರ ಸಂಘದ ಕಂಠೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ ಗ್ರಂಥಪಾಲಕ ಡಾ.ಲೋಕೇಶ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







