ತುಮಕೂರಿನಲ್ಲಿ ಕಡಿಮೆ : ಕೊರಟಗೆರೆ, ಮಧುಗಿರಿಯಲ್ಲಿ ಹೆಚ್ಚು ಮತದಾನ

ತುಮಕೂರು:

     ಜಿಲ್ಲೆಯಲ್ಲಿ ನಡೆದ 5 ನಗರ ಸ್ಥಳೀಯ ಸಂಸ್ಥೆಗಳ ಶೇಕಡಾವಾರು ಮತದಾನ ಗಮನಿಸಿದರೆ ತುಮಕೂರಿನಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವುದು ಕಂಡುಬರುತ್ತದೆ.

      ಬೆಳಗಿನಿಂದ ಸಂಜೆಯವರೆಗೂ ತುಮಕೂರು ನಗರದಲ್ಲಿ ಮತದಾನ ಮಂದಗತಿಯಲ್ಲಿಯೇ ಸಾಗಿದರೆ, ಇತರೆ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ತುಮಕೂರಿಗಿಂತ ಹೆಚ್ಚಿನ ಪ್ರಮಾಣದ ಮತದಾನವಾಗಿದೆ.

      ತುಮಕೂರು ಮಹಾನಗರ ಪಾಲಿಕೆಗೆ ಶೇ.59.25 ರಷ್ಟು ಮತದಾನವಾಗಿದ್ದರೆ, ಮಧುಗಿರಿ ಪುರಸಭೆಗೆ ಶೇ.81.04ರಷ್ಟು, ಚಿಕ್ಕನಾಯಕನಹಳ್ಳಿ ಪುರಸಭೆಗೆ ಶೇ.79.80ರಷ್ಟು, ಗುಬ್ಬಿ ಪಟ್ಟಣ ಪಂಚಾಯಿತಿಗೆ ಶೇ.79.10 ಹಾಗೂ ಕೊರಟಗೆರೆ ಪಟ್ಟಣ ಪಂಚಾಯಿತಿಗೆ ಶೇ.81.41ರಷ್ಟು ಮತದಾನವಾಗಿದೆ.

      ತುಮಕೂರು ಮಹಾನಗರ ಪಾಲಿಕೆಗೆ ಬೆಳಗ್ಗೆ 11 ಗಂಟೆಯವರೆಗೆ ಶೇ.20.02 ರಷ್ಟು ಮಾತ್ರವೇ ಮತದಾನವಾದರೆ, ಚಿ.ನಾ.ಹಳ್ಳಿ ಪುರಸಭೆಗೆ 26.24, ಗುಬ್ಬಿ ಪಟ್ಟಣ ಪಂಚಾಯತಿ 29.23, ಕೊರಟಗೆರೆ ಪಟ್ಟಣ ಪಂಚಾಯತಿಯಲ್ಲಿ ಶೇ.25.33 ರಷ್ಟು ಮತದಾನ ದಾಖಲಾಗಿತ್ತು.

      ಮಧ್ಯಾಹ್ನ 1 ಗಂಟೆಯ ಅಂಕಿ ಅಂಶ ಗಮನಿಸಿದರೆ ತುಮಕೂರು ಮಹಾನಗರ ಪಾಲಿಕೆಯ ಮತದಾನ ಶೇ.33.28 ರಷ್ಟಿದ್ದರೆ, ಚಿ.ನಾ.ಹಳ್ಳಿಯಲ್ಲಿ 48.21, ಗುಬ್ಬಿಯಲ್ಲಿ ಶೇ.49.78, ಕೊರಟಗೆರೆಯಲ್ಲಿ ಶೇ.46.02 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆವರೆಗಿನ ಚಿತ್ರಣ ಗಮನಿಸಿದರೆ ಚಿ.ನಾ.ಹಳ್ಳಿಯಲ್ಲಿ 64.51, ಮಧುಗಿರಿಯಲ್ಲಿ 61.66, ಗುಬ್ಬಿಯಲ್ಲಿ 65.81, ಕೊರಟಗೆರೆಯಲ್ಲಿ 62.50 ರಷ್ಟು ಮತದಾನವಾಗಿತ್ತು. ಆದರೆ ತುಮಕೂರಿನಲ್ಲಿ ಶೇ.45.83ಕ್ಕೆ ಸೀಮಿತಗೊಂಡಿತ್ತು.

      ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿಯೂ ತುಮಕೂರಿನಲ್ಲಿ ಕನಿಷ್ಠ ಮತದಾನವಾಗಿದ್ದನ್ನು ಗಮನಿಸಬಹುದು. ಮತದಾನದ ದಿನದಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿರುತ್ತದೆ. ಇದರ ಸದುಪಯೋಗ ಚುನಾವಣೆಗೆ ಬಳಕೆಯಾಗಬೇಕು. ಆದರೆ ರಜೆ ಹಾಕಿದ ನೌಕರರು ಎಲ್ಲಿ ಹೋಗುತ್ತಾರೆ? ಕನಿಷ್ಠ ಮತದಾನ ತುಮಕೂರು ನಗರದಲ್ಲಿ ನಡೆಯುತ್ತಿರುವುದಾದರೂ ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ.

      ತುಮಕೂರಿನ ಬಹಳಷ್ಟು ಅಧಿಕಾರಿ ನೌಕರ ವರ್ಗ ಬೆಂಗಳೂರಿನಂತಹ ರಾಜಧಾನಿಗಳಲ್ಲಿ ಬೀಡುಬಿಟ್ಟಿದೆ. ಇವರ ಮತಗಳು ತುಮಕೂರಿನಲ್ಲಿವೆ. ಮತದಾನದ ದಿನ ಇವರೆಲ್ಲ ತಮ್ಮ ಹಕ್ಕು ಚಲಾಯಿಸಬೇಕು. ಆದರೆ ಈ ವಿಷಯದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರ ಜೊತೆಗೆ ಈ ಬಾರಿ ಮಹಾನಗರ ಪಾಲಿಕೆ ವಾರ್ಡ್‍ವಾರು ಮತಪಟ್ಟಿ ಗಮನಿಸಿದಾಗ ಬಹಳಷ್ಟು ಮತದಾರರ ಹೆಸರುಗಳು ಬೇರೆಕಡೆ ಕಾಣಿಸಿಕೊಂಡಿರುವುದು, ಮತಗಟ್ಟೆಯೊಳಗೆ ಹೆಸರೇ ಇಲ್ಲದಿರುವುದು, ಹೆಸರು ಡಿಲೀಟ್ ಆಗಿರುವುದು ಇಂತಹ ಹಲವು ಲೋಪದೋಷಗಳು ಈ ಬಾರಿ ಕಾಣಿಸಿಕೊಂಡವು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link